ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮೊದಲ ಬಾರಿ ಅಧಿಕಾರ ವಹಿಸಿಕೊಂಡ ವರ್ಷವೇ 2014ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವವನ್ನು ಸಾರಿದರು. ಯೋಗವು ವಿಶ್ವ ಶಾಂತಿಗೂ ಪೂರಕ ಎನ್ನುವುದನ್ನು ವಿಶ್ವ ಸಂಸ್ಥೆಯ ಸದಸ್ಯರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟರು. ಆ ವೇಳೆ ವಿಶ್ವ ಸಂಸ್ಥೆಯ ಮುಂದೆ ಯೋಗ ದಿನ ಆಚರಣೆಯ ಪ್ರಸ್ತಾವನೆಯನ್ನು ಮುಂದಿಟ್ಟರು. ಇದನ್ನು ವಿಶ್ವ ಸಂಸ್ಥೆ ಮಾನ್ಯ ಮಾಡಿತು.
ನಂತರ ತನ್ನ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಿ, 2015ರಲ್ಲಿ ಜೂನ್ 21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತು. ಅದರೊಂದಿಗೆ, ಭಾರತಕ್ಕಷ್ಟೇ ಸೀಮಿತವಾಗಿದ್ದ, ಕೆಲವು ಆಸಕ್ತ ವಿದೇಶಿಗರಷ್ಟೇ ಮಾಡುತ್ತಿದ್ದ ಯೋಗವನ್ನು ಪ್ರಪಂಚದಾದ್ಯಂತ ಸಾಮೂಹಿಕವಾಗಿ ಅಭ್ಯಸಿಸುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾದರು.
ಪ್ರಧಾನಿ ಮೋದಿ ಅವರ ಭಾಷಣದ ಬಳಿಕ 2014ರ ಡಿಸೆಂಬರ್ 11ರಂದು ವಿಶ್ವ ಸಂಸ್ಥೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಯಿತು. ಭಾರತದ ವಿಶ್ವ ಸಂಸ್ಥೆಯ ಪ್ರತಿನಿಧಿ ಅಶೋಕ್ ಮುಖರ್ಜಿ ಅವರು ಕರಡನ್ನು ಸಿದ್ಧಪಡಿಸಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಈ ಕರಡಿಗೆ ಯಾವುದೇ ವಿರೋಧವಿಲ್ಲದೆ 177 ದೇಶಗಳು ಒಪ್ಪಿದವು. ಒಂದೂ ಮತ ಚಲಾವಣೆಯಾಗದೆ ಯೋಗ ದಿನ ಆಚರಣೆಯ ಕರಡು ಪ್ರತಿ ಅಂಗೀಕಾರವಾಯಿತು. ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ಇದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಕರಾರು ಇಲ್ಲದೆ, ಹೆಚ್ಚಿನ ಬೆಂಬಲ ಪಡೆದು ಅಂಗೀಕಾರಗೊಂಡ ಮಸೂದೆ ಎಂಬ ಖ್ಯಾತಿಯನ್ನು ಹೊಂದಿದೆ.
ಭಾರತದಲ್ಲಿ ಯೋಗ ದಿನಕ್ಕೆ ಬೇಕಾದ ತಯಾರಿಯನ್ನು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವ್ಯವಸ್ಥೆ ಮಾಡುತ್ತದೆ. 2015ರ ಜೂ.21ರಂದು ಆಚರಿಸಲಾದ ಮೊಟ್ಟಮೊದಲ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ, 84 ದೇಶಗಳ ಪ್ರತಿನಿಧಿಗಳು ಸೇರಿದಂತೆ 35,985 ಜನರು ನವದೆಹಲಿಯ ರಾಜಪಥ್‌ನಲ್ಲಿ 35 ನಿಮಿಷ 21 ಆಸನಗಳನ್ನು ಪ್ರದರ್ಶಿಸಿದರು. ಇದನ್ನು ವಿಶ್ವದ ಲಕ್ಷಾಂತರ ಜನ ವೀಕ್ಷಿಸಿದರು. ಏಕಕಾಲದಲ್ಲಿ ಇದು ಎರಡು ಗಿನ್ನೆಸ್ ದಾಖಲೆಗಳನ್ನು ಬರೆಯಿತು. ಒಂದೇ ಬಾರಿಗೆ 35,985 ಜನರು ಏಕಕಾಲಕ್ಕೆ ಒಂದೆಡೆ ಯೋಗ ಅಭ್ಯಾಸ ಮಾಡಿದ್ದು ಮೊದಲ ದಾಖಲೆ ಆದರೆ, ಒಂದೇ ಬಾರಿಗೆ 84 ದೇಶದ ಪ್ರತಿನಿಧಿಗಳು ಯೋಗದಲ್ಲಿ ಭಾಗವಹಿಸಿದ್ದು ಮತ್ತೊಂದು ದಾಖಲೆಯಾಯಿತು.
ಅಮೆರಿಕದ ಸ್ಯಾನ್‌ಫ್ರ್ಯಾನ್ಸಿಸ್ಕೋದ ಮರಿನಾ ಗ್ರೀನ್ ಪಾರ್ಕ್ನಲ್ಲಿ 5 ಸಾವಿರ ಜನರು ಸಾಮೂಹಿಕವಾಗಿ ಯೋಗ ಮಾಡಿದರು. ಅಲ್ಲದೆ ಜಗತ್ತಿನ ನಾನಾ ದೇಶಗಳಲ್ಲಿ ಭಾರತೀಯರು ಹಾಗೂ ವಿದೇಶಿಗರೂ ಸೇರಿದಂತೆ ಲಕ್ಷಾಂತರ ಜನರು ಯೋಗಾಸನಗಳನ್ನು ಪ್ರದರ್ಶಿಸಿದರು. ಅತ್ತ ಭಾರತದ ಆಯುಷ್ ಇಲಾಖೆ 2 ಗಿನ್ನೆಸ್ ದಾಖಲೆ ಮಾಡಿದರೆ ಇತ್ತ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತೊಂದು ದಾಖಲೆ ಬರೆದರು. ವಿವಿಧ ಸ್ಥಳಗಳಲ್ಲಿ ಒಂದೇ ಬಾರಿಗೆ ಒಂದೇ ಸಮವಸ್ತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅವರು ಯೋಗದಲ್ಲಿ ಭಾಗವಹಿಸಿದ್ದು ಲಿಮ್ಕಾ ಪುಸ್ತಕದಲ್ಲಿ ದಾಖಲಾಯಿತು.
Comments
Post a Comment