ಬಿಗ್ ನ್ಯೂಸ್: ಕೊನೆಗೂ 'ಯಡಿಯೂರಪ್ಪನವರಿಗೆ   ಸೂಚನೆ' ನೀಡಿದ ಹೈಕಮಾಂಡ್! ಸರ್ಕಾರ ಇನ್ನಷ್ಟು ಗಟ್ಟಿ!

ಬೆಂಗಳೂರು,ಸೆ.13- ಸರ್ಕಾರವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 2ನೇ ಹಂತದ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ವರಿಷ್ಠರು ರೆಡ್ ಸಿಗ್ನಲ್ ಕೊಟ್ಟಿದ್ದಾರೆ.

ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾಗುವವರೆಗೂ ಅನ್ಯ ಪಕ್ಷಗಳ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ದೆಹಲಿಯಿಂದ ಬಂದಿದೆ.

ಹೀಗಾಗಿ ಸದ್ಯಕ್ಕೆ 2ನೇ ಹಂತದ ಆಪರೇಷನ್ ಕಮಲಕ್ಕೆ ವಿರಾಮ ಬಿದ್ದಿದ್ದು ಬಿಜೆಪಿ ಸೇರ್ಪಡೆಯಾಗಿ ಗೂಟದ ಕಾರು ಕನಸು ಕಂಡಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಈ ಬಾರಿ 2ನೇ ಹಂತದ ಆಪರೇಷನ್ ಕಮಲದಲ್ಲಿ ವಿಶೇಷವಾಗಿ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನೇ ಗುರಿಯಾಗಿಟ್ಟುಕೊಂಡು 20ಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿತ್ತು.
ಒಂದೆಡೆ ಸಂಘಟನೆ ಕೊರತೆಯಿಂದ ದುರ್ಬಲವಾಗಿರುವ ಪಕ್ಷವನ್ನು ಬಲಗೊಳಿಸುವುದು ಮತ್ತೊಂದೆಡೆ ಸರ್ಕಾರವನ್ನು ವಿರೋಧ ಪಕ್ಷಗಳು ಅಸ್ಥಿರಗೊಳಿಸಲು ಅವಕಾಶ ನೀಡದಂತೆ ಬಿಎಸ್‍ವೈ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಸುಮಾರು 20 ಮಂದಿ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದರು. ಇದಕ್ಕೆ ಮುನ್ನುಡಿ ಎಂಬಂತೆ ನಿನ್ನೆಯಷ್ಟೇ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಎಸ್.ಆರ್.ಶ್ರೀನಿವಾಸ್ ದಳಪತಿಗಳ ವಿರುದ್ದವೇ ತಿರುಗಿಬಿದ್ದಿದ್ದರು.

ವಿಶೇಷವಾಗಿ ಈ ಬಾರಿ ಜೆಡಿಎಸ್‍ನ ಭದ್ರಕೋಟೆಗಳಾದ ಮಂಡ್ಯ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಕೆಲವು ಶಾಸಕರನ್ನು ಬಿಜೆಪಿಗೆ ಆಹ್ವಾನಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದ ಕೆಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದರು. ಮಂಡ್ಯದಲ್ಲಿ ನಾಲ್ವರು, ಹಾಸನ-1, ಚಿಕ್ಕಬಳ್ಳಾಪುರ-1 ಸೇರಿದಂತೆ 12 ಶಾಸಕರು ಕಮಲ ಪಕ್ಷದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಇನ್ನು ಕಾಂಗ್ರೆಸ್‍ನಲ್ಲೂ ಅಸ್ತಿತ್ವದ ಭೀತಿ ಕಾಡುತ್ತಿರುವ ಅಸಮಾಧಾನಿತ ಹತ್ತಕ್ಕೂ ಹೆಚ್ಚು ಶಾಸಕರು ಬಿಜೆಪಿ ಕದ ತಟ್ಟಿದ್ದರು. ವಿಶೇಷವಾಗಿ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಇಬ್ಬರು, ಬೆಳಗಾವಿಯಲ್ಲಿ ಇಬ್ಬರು, ಮೈಸೂರಿನ ಇಬ್ಬರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಇಬ್ಬರು ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದಿದ್ದರು.

ಅಧಿಕಾರದ ಆಸೆಗಾಗಿ ಅನ್ಯ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಿದರೆ ಪಕ್ಷದ ನಿಷ್ಠಾವಂತರು ಅಸಮಾಧಾನಗೊಳ್ಳಬಹುದು. ಇದು ತಿರುಗುಬಾಣವಾಗಬಹುದೆಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಆಪರೇಷನ್ ಕಮಲ ಬೇಡ ಎಂಬ ಸೂಚನೆ ರವಾನೆಯಾಗಿದೆ.

ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 105, ಕಾಂಗ್ರೆಸ್ 66, ಜೆಡಿಎಸ್ 34 ಸದಸ್ಯರನ್ನು ಹೊಂದಿದೆ. 17 ಶಾಸಕರು ಅನರ್ಹಗೊಂಡಿದ್ದು, ಬಿಜೆಪಿ ಉಪಚುನಾವಣೆಯಲ್ಲಿ ಕನಿಷ್ಟ ಪಕ್ಷ 10 ಸ್ಥಾನವನ್ನಾದರೂ ಗೆಲ್ಲಬೇಕು. ಆದರೆ ಮುಂದೊಂದು ದಿನ ಪಕ್ಷದಲ್ಲಿರುವ ಅಸಮಾಧಾನಿತರೇ ಕೈ ಕೊಟ್ಟರೆ ಇಲ್ಲವೆ ಪ್ರತಿಪಕ್ಷಗಳು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬಹುದೆಂಬ ಭೀತಿಯಿಂದ ಬಿಎಸ್‍ವೈ ಈ ಲೆಕ್ಕಾಚಾರಕ್ಕೆ ಬಂದಿದ್ದರು.

ಬಹುತೇಕ ಬಿಜೆಪಿಯಲ್ಲಿ ಭಿನ್ನಮತ ಶಮನವಾಗಿದ್ದು, ಸರ್ಕಾರ ಹೇಗೋ ನಡೆದುಕೊಂಡು ಹೋಗುತ್ತಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ಪ್ರತಿಪಕ್ಷಗಳನ್ನು ಅಸ್ಥಿರಗೊಳಿಸದಂತೆ ವರಿಷ್ಠರು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.


Comments