ಹೊಸದಿಲ್ಲಿ: ಜೂನ್ 1975ರಲ್ಲಿ ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಹೇರಲ್ಪಟ್ಟ ತುರ್ತುಪರಿಸ್ಥಿತಿಯ 45ನೇ ವರ್ಷದ ಸಂದರ್ಭ ತುರ್ತು ಪರಿಸ್ಥಿತಿಯನ್ನು ಕಟುವಾಗಿ ವಿರೋಧಿಸಿದ್ದವರ ಗೌರವಾರ್ಥ ಇಂದು ಟ್ವೀಟ್ ಮಾಡಿದ ಗೃಹ ಸಚಿವ ಅಮಿತ್ ಶಾ, ರಾತ್ರಿ ಬೆಳಗಾಗುವುದರೊಳಗಾಗಿ ದೇಶವನ್ನು `ಕಾರಾಗೃಹ'ವನ್ನಾಗಿ ಮಾರ್ಪಡಿಸಿದ್ದಕ್ಕಾಗಿ 'ಒಂದು ಕುಟುಂಬ'ವನ್ನು ಟೀಕಿಸಿದ್ದಾರೆ.
'45 ವರ್ಷಗಳ ಹಿಂದೆ ಈ ದಿನದಂದು ಒಂದು ಕುಟುಂಬದ ಅಧಿಕಾರದ ಲಾಲಸೆ ತುರ್ತುಪರಿಸ್ಥಿತಿ ಹೇರಲು ಕಾರಣವಾಯಿತು. ರಾತ್ರಿ ಬೆಳಗಾಗುವುದರೊಳಗಾಗಿ ದೇಶ ಕಾರಾಗೃಹವಾಗಿ ಮಾರ್ಪಟ್ಟಿತ್ತು. ಮಾಧ್ಯಮ. ನ್ಯಾಯಾಲಯ, ವಾಕ್ ಸ್ವಾತಂತ್ರ್ಯ ಎಲ್ಲವನ್ನೂ ಹೊಸಕಿ ಹಾಕಲಾಯಿತು. ಬಡವರ ಹಾಗೂ ನಿರ್ಗತಿಕರ ಮೇಲೆ ದೌರ್ಜನ್ಯ ನಡೆಸಲಾಯಿತು'' ಎಂದು ಶಾ ಟ್ವೀಟ್ ಮಾಡಿದ್ದಾರೆ.
'ಲಕ್ಷಾಂತರ ಮಂದಿಯ ಪ್ರಯತ್ನಗಳಿಂದಾಗಿ ತುರ್ತುಪರಿಸ್ಥಿತಿಯನ್ನು ಕೈಬಿಡಲಾಯಿತು.
ಪ್ರಜಾಪ್ರಭುತ್ವ ಮರುಸ್ಥಾಪನೆಯಾಯಿತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವವಿಲ್ಲ. ಒಂದು ಕುಟುಂಬದ ಹಿತಾಸಕ್ತಿಯು ಪಕ್ಷದ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ಮೇಲಾಗಿತ್ತು. ಇದೇ ದುಸ್ಥಿತಿ ಇಂದು ಕೂಡ ಕಾಂಗ್ರೆಸ್ ಪಕ್ಷದಲ್ಲಿದೆ. ದೇಶದ ವಿಪಕ್ಷಗಳಲ್ಲೊಂದಾಗಿ ಕಾಂಗ್ರೆಸ್ ತನ್ನನ್ನು ತಾನೇ ಕೇಳಿಕೊಳ್ಳಬೇಕಿದೆ- ತುರ್ತುಪರಿಸ್ಥಿತಿಯ ಮನಃಸ್ಥಿತಿ ಈಗಲೂ ಏಕಿದೆ?, ಒಂದು ವಂಶಕ್ಕೆ ಸೇರದ ನಾಯಕರು ಮಾತನಾಡಲು ಏಕೆ ಸಾಧ್ಯವಾಗುತ್ತಿಲ್ಲ? ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇಕೆ ಹತಾಶರಾಗುತ್ತಿದ್ದಾರೆ?'' ಎಂದು ಶಾ ತಮ್ಮ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೀಗೆಂದು ಟ್ವೀಟ್ ಮಾಡಿದ್ದಾರೆ- 'ಭಾರತದ ಆಡಳಿತ ಪಕ್ಷವಾಗಿ ಬಿಜೆಪಿ ಉತ್ತರ ನೀಡಬೇಕಿದೆ: ಬಹುಮತದ ಆಡಳಿತವನ್ನು ಇಬ್ಬರು ವ್ಯಕ್ತಿಗಳ ಸರಕಾರವೆಂದು ಏಕೆ ಬಣ್ಣಿಸಲಾಗುತ್ತಿದೆ ಹಾಗೂ ಎಲ್ಲಾ ಇತರರು ಏಕೆ ಕೇವಲ ಸೈಡ್ ಕಿಕ್ ಗಳಾಗಿದ್ದಾರೆ?, ಕುದುರೆ ವ್ಯಾಪಾರ, ಸಾಮೂಹಿಕ ವಲಸೆಗಳು ಹಾಗೂ ಸಂಸ್ಥೆಗಳ ಕೈವಶ ಮಾತ್ರ ಅದರ ಇತಿಹಾಸ ಏಕಾಗಿದೆ? ಈ ಪಕ್ಷವೇಕೆ ಇನ್ನೂ ನೆಹರೂ-ಗಾಂಧಿ ವಿರುದ್ಧ ದ್ವೇಷ ಸಾಧಿಸುತ್ತಿದೆ?''
Comments
Post a Comment