ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಓರ್ವ ಸೈನ್ಯಾಧಿಕಾರಿ ಸೇರಿದಂತೆ ಮೂವರು ಭಾರತೀಯರು ಹುತಾತ್ಮರಾಗಿದ್ದಾರೆ ಎಂಬ ವಿಷಯ ವರದಿಯಾಗಿದೆ.
ಲಡಾಖ್ ಗಡಿಯಲ್ಲಿ ಈ ಘಟನೆ ನಡೆಯುತ್ತಿದ್ದಂತೆ ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಮೂರು ಸೇನೆಯ ಮುಖ್ಯಸ್ಥರ ಜೊತೆ ತುರ್ತು ಸಭೆ ನಡೆಸುತ್ತಿದ್ದಾರೆ.
ಚೀನಾ ಮತ್ತು ಭಾರತದ ಗಡಿ ವಿಚಾರದಲ್ಲಿ ವರದಿಯಾಗಿರುವ ಘಟನೆಗೆ ಸಂಬಂಧಪಟ್ಟಂತೆ, ಮುಂದಿನ ನಿರ್ಧಾರ ಹೇಗಿರಬೇಕು, ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಕುರಿತು ಮಾತುಕತೆ ಆಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಘಟನೆ ನಡೆದ ಬಳಿಕ ಚೀನಾ ಸೇನೆ ಪ್ರತಿಕ್ರಿಯೆ ನೀಡಿದ್ದು ''ಯಾವುದೇ ಕಾರಣ ಭಾರತ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಇದರಿಂದ ಸಾಕಷ್ಟು ತೊಂದರೆಯಾಗಲಿದೆ' ಎಂದು ಹೇಳಿದೆ.
ಇನ್ನು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಘರ್ಷಣೆಯಲ್ಲಿ "ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿವೆ" ಎಂದು ಭಾರತೀಯ ಸೇನೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ರಕ್ಷಣ ಸಚಿವ ರಾಜನಾಥ್ ಸಿಂಗ್ ''ಚೀನಾ ಮತ್ತು ಭಾರತ ನಡುವಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜತಾಂತ್ರಿಕ ಮಾತುಕತೆ ಸಕಾರಾತ್ಮಕವಾಗಿದೆ. ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿದ್ದೇವೆ'' ಎಂದು ಹೇಳಿದ್ದರು.
Comments
Post a Comment