ಬ್ರೇಕಿಂಗ್ ನ್ಯೂಸ್: ಸಚಿನ್ ಪೈಲಟ್‌ ಹಾಗೂ 18 ಕಾಂಗ್ರೆಸ್ ಶಾಸಕರು ಇಂದು ಹೈಕೋರ್ಟ್ ಮೆಟ್ಟಿಲೇರಿದಾದರು ಏಕೆ?.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್‌ ನಡುವಿನ ಭಿನ್ನಾಭಿಪ್ರಾಯದಿಂದ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಹೈಡ್ರಾಮಾ ಸದ್ಯ ಹೈಕೋರ್ಟ್‌ ಮೆಟ್ಟಿಲೇರಿದೆ. ಹೌದು ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್‌ ಪೈಲಟ್ ಹಾಗೂ ಅವರ 18 ಬೆಂಬಲಿಗ ಶಾಸಕರಿಗೆ ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ಅನರ್ಹತೆ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೀಗ ಇದನ್ನು ಪ್ರಶ್ನಿಸಿ ಪೈಲಟ್ ಸೇರಿ 19 ಶಾಸಕರು ರಾಜಸ್ಥಾನದ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇಂದು ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಈ ಅರ್ಜಿ ವಿಚಾರಣೆ ನಡೆಯಲಿದೆ.
ಏನಿದು ವಿವಾದ?
ಸೋಮವಾರ ಹಾಗೂ ಮಂಗಳವಾರ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ಇತ್ತು. ಈ ಸಂಬಂಧ ಸಚೇತಕಾಜ್ಞೆ (ವಿಪ್‌) ಹೊರಡಿಸಲಾಗಿತ್ತು. ಆದರೆ ವಿಪ್‌ ಉಲ್ಲಂಘಿಸಿದ ಈ 19 ಶಾಸಕರು ಸಭೆಗೆ ಗೈರು ಹಾಜರಾಗಿದ್ದರು. ಇದನ್ನು ಪರಿಗಣಿಸಿದ ಕಾಂಗ್ರೆಸ್‌ ಮುಖ್ಯ ಸಚೇತಕ ಮಹೇಶ್‌ ಜೋಶಿ ಅವರು ಸಭಾಧ್ಯಕ್ಷ ಸಿ.ಪಿ. ಜೋಶಿ ಅವರಿಗೆ ಅನರ್ಹತೆ ದೂರು ಸಲ್ಲಿಸಿದ್ದರು. ಈ ಪ್ರಕಾರ ಸಿ.ಪಿ. ಜೋಶಿ ಅವರು 19 ಶಾಸಕರಿಂದ ಶುಕ್ರವಾರದೊಳಗೆ ಉತ್ತರ ಕೋರಿ ನೋಟಿಸ್‌ ಜಾರಿ ಮಾಡಿದ್ದಾರೆ. ‘ಈ ಶಾಸಕರು ಉದ್ದೇಶಪೂರ್ವಕವಾಗಿ ಸಭೆಗೆ ಗೈರು ಹಾಜರಾಗಿದ್ದಾರೆ. ಸರ್ಕಾರ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸರ್ಕಾರ ಬೀಳಿಸುವ ಯತ್ನ ನಡೆದಿವೆ’ ಎಂದು ಅನರ್ಹತೆ ದೂರಿನಲ್ಲಿ ಮಹೇಶ್‌ ಜೋಶಿ ತಿಳಿಸಿದ್ದಾರೆ.
ವ್ಹಿಪ್ ಉಲ್ಲಂಘಿಸಿಲ್ಲ ಇನ್ನು ಕಾಂಗ್ರೆಸ್ ಜಾರಿಗೊಳಿಸಿದ ನೋಟೀಸ್ ಕುರಿತು ಪ್ರತಿಕ್ರಿಯಿಸಿರುವ ರೆಬೆಲ್ ಶಾಸಕ ಭಂವರ್‌ಲಾಲ್ ಶರ್ಮಾ 'ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲ. ವ್ಹಿಪ್ ಕೇವಲ ವಿಧಾನಸಭೆಯಲ್ಲಷ್ಟೇ ಅನ್ವಯವಾಗುತ್ತದೆ. ಪಕ್ಷ ಏರ್ಪಡಿಸುವ ವಿಧಾನಸಭೆ ಹೊರಗಿನ ಮೀಟಿಂಗ್‌ಗೆ ಇದು ಅನ್ವಯವಾಗುವುದಿಲ್ಲ. ಹೀಗಾಗಿ ವ್ಹಿಪ್ ಉಲ್ಲಂಘಿಸಿದ್ದಾರೆಂಬ ಆರೋಪವೇ ಆಧಾರಹೀನ' ಎಂದಿದ್ದಾರೆ. 
ಜಿಲ್ಲಾ, ಬ್ಲಾಕ್‌ ಸಮಿತಿ ವಿಸರ್ಜನೆ: 
ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಬುಧವಾರ ರಾಜಸ್ಥಾನದ ಎಲ್ಲಾ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ತನ್ನೆಲ್ಲಾ ಸಮಿತಿಗಳನ್ನು ವಿಸರ್ಜಿಸಿದೆ. ಸಚಿನ್‌ ಪೈಲಟ್‌ ಅವರ ಬೆಂಬಲಿಗರೆಲ್ಲರನ್ನು ಹುದ್ದೆಯಿಂದ ಹೊರಗಿಡುವ ನಿಟ್ಟಿನಲ್ಲಿ ಈ ನಿರ್ಧಾರ ತಾಳಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಬಂಡೆದ್ದಿರುವ ಶಾಸಕರಿಗೂ ಈಗಲೂ ಪಕ್ಷದ ಬಾಗಿಲು ತೆರೆದಿದೆ. ಸಚಿನ್‌ ಸೇರಿದಂತೆ ಎಲ್ಲಾ ನಾಯಕರು ಮತ್ತೆ ಪಕ್ಷದ ವೇದಿಕೆಗೆ ಬಂದು ತಮ್ಮ ಅಹವಾಲು ದಾಖಲಿಸಬಹುದು ಎಂದು ಹೇಳುವ ಮೂಲಕ ಬಂಡಾಯ ತಣ್ಣಗಾಗಿಸುವ ಮತ್ತೊಂದು ದಾಳವನ್ನು ಪಕ್ಷದ ನಾಯಕರು ಉರುಳಿಸಿದ್ದಾರೆ. ಇನ್ನು ರಾಜಸ್ಥಾನದ ಈ ರಾಜಕೀಯ ಡ್ರಾಮಾ ಎಲ್ಲಿಯವರೆಗೆ ಮುಂದುವರೆಯುತ್ತೆ? ಇಂದು ಮೂರು ಗಂಟೆಗೆ ನಡೆಯುವ ವಿಚಾರಣೆ ಬಳಿಕ ತಿಳಿಯಲಿದೆ,...