ಇದೀಗ ಬಂದ ಸುದ್ದಿ:ಡಿ.ಕೆ ಶಿವಕುಮಾರ್ ಬಿಜೆಪಿಯಿಂದ ಕಾಂಗ್ರೆಸ್ ಗೆ ಯಾರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ ಗೊತ್ತಾ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕಾಂಗ್ರೆಸ್​ಗೆ 'ತಾರಾ'ಬಲ ತರಲು ಪ್ರಯತ್ನಿಸುತ್ತಿದ್ದಾರೆ. ಅರ್ಥಾತ್​, ಖ್ಯಾತ ಚಿತ್ರನಟಿ, ಬಿಜೆಪಿಯ ಮಾಜಿ ಎಂಎಲ್​ಸಿ ತಾರಾ ಅನುರಾಧಗೆ ಶಿವಕುಮಾರ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಅಂತ ತಿಳಿದುಬಂದಿದೆ.
ಕಾಂಗ್ರೆಸ್​ ಮಹಿಳಾ ನಾಯಕಿಯರ ಜೊತೆ ಚರ್ಚೆಯ ನಂತರ, ನಿನ್ನೆ ಸಂಜೆ ಪಕ್ಷದ ಕಚೇರಿಯಿಂದಲೇ ತಾರಾ ಅವರಿಗೆ ಶಿವಕುಮಾರ್​ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್​ ಸೇರ್ಪಡೆಗೊಳ್ಳುವಂತೆ ತಾರಾ ಅವರಿಗೆ ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ತಾರಾ ಅನುರಾಧಗೆ ಕರೆ ಮಾಡಿ ಮೊದಲು ಹಾಸ್ಯದ ಧಾಟಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಏನಮ್ಮ, ನಾನು ಯಾರಾದ್ರೂ ಯಂಗ್ ಹೀರೋಯಿನ್ಸ್​​ಗೆ ಕಾಲ್ ಮಾಡೋಣ ಅಂದೆ, ಇವರೆಲ್ಲ ನಂಗೆ ಹೊಡಿಯೋಕೇ ಬಂದ್ರು' ಎಂದು ನಕ್ಕರು. ಈ ಕರೆ ನಾನಾಗಿ ಮಾಡ್ತಿಲ್ಲಮ್ಮ, ನಮ್ಮ ಪಕ್ಷದ ಮಹಿಳಾ ನಾಯಕಿಯರ ಒತ್ತಾಯದ ಮೇಲೆ ಫೋನ್ ಮಾಡ್ತಿದ್ದೀನಿ. ನೀವು ಹೆಣ್ಮಕ್ಕಳು ಹೇಳ್ತಿರಲ್ಲ, ಸಂಜೆ ದೀಪ ಹಚ್ಚೋ ಹೊತ್ತು ಅಂತ ಆ ಶುಭ ಘಳಿಗೆಯಲ್ಲಿ ಫೋನ್ ಮಾಡಿದ್ದೀನಿ ನೋಡಮ್ಮ. ನಿಮ್ಮ ಪಕ್ಷದಲ್ಲಿ ನಿಮ್ಮನ್ನ ಎಂಎಲ್​​ಸಿ ಮಾಡ್ತಾರೆ ಅಂತ ನಾವೂ ಅಂದ್ಕೊಂಡಿದ್ವಿ, ಆದರೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ನಿಮಗೆ ಅವಕಾಶ ಮಾಡಿಕೊಡ್ತೀವಿ, ಯೋಚನೆ ಮಾಡು ತಾಯಿ. ಮುಂದೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರೋದು. ಎಲ್ಲಾ ಗೌರವ, ಸ್ಥಾನಮಾನ ಕೊಡ್ತೀವಿ. 'ಒಂದು ಒಳ್ಳೇ ತೀರ್ಮಾನ ಮಾಡು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಡಿಕೆಎಸ್​​ ಆಹ್ವಾನಕ್ಕೆ ತಾರಾ ಪ್ರತಿಕ್ರಿಯೆ ಏನು..?
ನೀವು ನನ್ನ ಬಗ್ಗೆ ಇಷ್ಟು ಗೌರವ ಹೊಂದಿರೋದು ಬಹಳ ಖುಷಿ ಆಯ್ತು ಅಣ್ಣ. ನೀವೆಲ್ಲ ನೋಡಿದ್ದೀರಿ, ನಾನು ಆರಂಭದಿಂದ ಬಿಜೆಪಿಯಲ್ಲೇ ಬೆಳೆದವಳು. ಪಕ್ಷ ಹಾಗೂ ಸಂಘಟನೆಯ ಜೊತೆ ಗುರುತಿಸಿಕೊಂಡವಳು. ಆ ರೀತಿಯ ಯೋಚನೆ ನನ್ನಲ್ಲಿಲ್ಲ ಅಣ್ಣ ಎಂದು ತಾರಾ ಹೇಳಿದ್ದಾರೆ ಎನ್ನಲಾಗಿದೆ. ಮತ್ತೊಮ್ಮೆ ಯೋಚನೆ ಮಾಡಮ್ಮ, ನಮ್ಮ ಪಕ್ಷದ ನಾಯಕಿಯರು ನಿನ್ನ ಜೊತೆ ಮಾತಾಡ್ತಾರೆ ಎಂದು ಹೇಳಿ ಡಿ.ಕೆ ಶಿವಕುಮಾರ್​ ಮಾತುಕತೆ ಮುಗಿಸಿದ್ದಾರೆ.
ಬಲಿಜ ಸಮುದಾಯಕ್ಕೆ ಸೇರಿದ ಮಹಿಳಾ ನಾಯಕಿ ತಾರಾ ಅನುರಾಧ ವಿಧಾನ ಪರಿಷತ್​​ಗೆ ನಾಮನಿರ್ದೇಶನಗೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಸಿಎಂ ಯಡಿಯೂರಪ್ಪ ಭಾರತಿ ಶೆಟ್ಟಿಯವರನ್ನು ಪರಿಷತ್​​ಗೆ ನಾಮನಿರ್ದೇಶನ ಮಾಡುವುದರೊಂದಿಗೆ ತಾರಾ ಅವರ ನಿರೀಕ್ಷೆ ಸುಳ್ಳಾಯ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದ್ದು, ತಾರಾ ನಡೆ ಕುತೂಹಲ ಮೂಡಿಸಿದೆ.
ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ ಮಾಡಲಿರುವ ಡಿ.ಕೆ. ಶಿವಕುಮಾರ್, ಈ ವೇಳೆ ತಾರಾಗೆ ಪ್ರಮುಖ ಸ್ಥಾನಮಾನ ನೀಡುವ ಆಲೋಚನೆ ಹೊಂದಿದ್ದಾರೆ ಎನ್ನಲಾಗಿದೆ. ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಎಂಎಲ್​ಸಿಯಾಗಿ ನಾಮನಿರ್ದೇಶನ ಮಾಡುವ ಆಫರ್ ನೀಡಿದ್ದಾರೆ ಎಂದು ಕೆಪಿಸಿಸಿ ಮೂಲಗಳು ಖಚಿತ ಪಡಿಸಿವೆ. ಕೈ ಪಕ್ಷಕ್ಕೆ ತಾರಾಬಲ ತರುವ ಡಿಕೆ ಶಿವಕುಮಾರ್ ಯತ್ನ ಸಕ್ಸಸ್ ಆಗುತ್ತಾ ಅನ್ನೋ ಪ್ರಶ್ನೆಗೆ ತಾರಾ ನಿರ್ಧಾರವೇ ಉತ್ತರವಾಗಲಿದೆ.