ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿತ್ತಿರುವ ದೊಡ್ಡ ಕಾರಣವೇನು ಗೊತ್ತಾ?

ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಲಿದ್ದಾರೆ. ಇಂತಹ ಸುದ್ದಿಗಳು ಎರಡು ತಿಂಗಳಿನಿಂದ ಹರಿದಾಡುತ್ತಿವೆ. ಈ ಬಗ್ಗೆ ಶಾಸಕರು ಸಹ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಶರತ್‌ಗೆ ಮತ್ತೆ ಆಹ್ವಾನ ಕೊಟ್ಟಿದ್ದಾರೆ.
ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಕೆರೆ ಭರ್ತಿಯಾಗಿದೆ. ಬುಧವಾರ ಶಾಸಕ ಶರತ್ ಬಚ್ಚೇಗೌಡ ಮತ್ತು ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಕಾಂಗ್ರೆಸ್ ಹಿರಿಯ ನಾಯಕ ಕೆ. ಆರ್. ರಮೇಶ್ ಕುಮಾರ್ ಕೆರೆಗೆ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಕೆ. ಆರ್. ರಮೇಶ್ ಕುಮಾರ್, "ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ನಾನು ಹೆಗಲ ಮೇಲೆ ಕೂರಿಸಿಕೊಂಡು ಕರೆದುಕೊಂಡು ಬರುತ್ತೇನೆ"ಎಂದು ಪಕ್ಷಕ್ಕೆ ಆಹ್ವಾನಿಸಿದರು
ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ನಾಯಕ ಎಂಟಿಬಿ ನಾಗರಾಜ್‌ಗೆ ತಕ್ಕಪಾಠ ಕಲಿಸಲು ಯುವಕರ ಕಣ್ಮಣಿ ಶರತ್ ಬಚ್ಚೇಗೌಡನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
"ಶರತ್ ಬಚ್ಚೇಗೌಡ ನನ್ನ ಮಗನಿದ್ದಂತೆ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು. ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾದರೆ ಅದಕ್ಕಿಂತ ಆನಂದ ಬೇರೊಂದಿಲ್ಲ. ಅವರ ತೀರ್ಮಾನವನ್ನು ಹಿತೈಷಿಗಳೊಂದಿಗೆ ಚರ್ಚಿಸಿ ಕೈಗೊಳ್ಳಲಿ" ಎಂದು ರಮೇಶ್ ಕುಮಾರ್ ಹೇಳಿದರು.
ರಮೇಶ್ ಕುಮಾರ್ ಸಮ್ಮುಖದಲ್ಲಿಯೇ ಮಾತನಾಡಿದ ಶರತ್ ಬಚ್ಚೇಗೌಡ, "ಹೊಸಕೋಟೆ ತಾಲೂಕಿನಲ್ಲಿ ಯಾವುದೇ ತೀರ್ಮಾನವನ್ನು ಏಕ ಪಕ್ಷೀಯವಾಗಿ ನಾನು ತೆಗೆದುಕೊಂಡಿಲ್ಲ. ಜನರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದರು.
ಹಿಂದೆಯೂ ಕಾಂಗ್ರೆಸ್ ಸೇರುವ ವಿಚಾರ ಚರ್ಚೆಗೆ ಬಂದಾಗ ಶರತ್ ಬಚ್ಚೇಗೌಡ, "ಹೊಸಕೋಟೆ ತಾಲೂಕಿನ ಜನರ ಋಣ ನನ್ನ ಮೇಲಿದೆ. ಪಕ್ಷಾತೀತವಾಗಿ ನನ್ನನ್ನು ಒಪ್ಪಿ ಮತ ನೀಡಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಸೇರುವ ಕುರಿತು ನನ್ನ ವೈಯಕ್ತಿಕ ನಿರ್ಧಾರ ಏನೂ ಇಲ್ಲ" ಎಂದು ಹೇಳಿದ್ದರು.