ಮೈಸೂರು: ಆಹಾರದಲ್ಲಿ ಅಡಗಿಸಿಟ್ಟಿದ್ದ ಸಿಡಿಮದ್ದಿಗೆ ಹಸು ಬಲಿ.

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದ ನರಸಿಂಹೇಗೌಡ ಅವರಿಗೆ ಸೇರಿದ ಹಸುವೊಂದು ಕಾಡಂಚಿನಲ್ಲಿ ಆಹಾರದೊಳಗೆ ಅಡಗಿಸಿಟ್ಟಿದ್ದ ಸಿಡಿಮದ್ದನ್ನು ತಿಂದು ಮೃತಪಟ್ಟಿದೆ. ಹಲಸಿನ ಹಣ್ಣಿನ ಸಿಪ್ಪೆಯಲ್ಲಿ ಸಿಡಿಮದ್ದನ್ನು ಇಡಲಾಗಿತ್ತು. ಇದನ್ನು ಜಗಿದ ತಕ್ಷಣದ ಅದು ಸ್ಫೋಟಗೊಂಡಿದೆ. ನಾಲಿಗೆ, ದವಡೆಯ ಭಾಗಗಳು ಸಂಪೂರ್ಣ ಸುಟ್ಟು ಹೋಗಿ, ನೋವಿನಿಂದ ಬಳಲುತ್ತಿತ್ತು.
ಸ್ಥಳಕ್ಕೆ ಬಂದ 'ಪೀಪಲ್ಸ್ ಫಾರ್ ಎನಿಮಲ್ಸ್' ಸಂಸ್ಥೆಯ ಪಶುವೈದ್ಯರು ಹಸುವನ್ನು ಬದುಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಂತರ, ಹಸುವಿಗೆ ದಯಾಮರಣ ನೀಡಲಾಯಿತು ಎಂದು ಸಂಸ್ಥೆಯ ಟ್ರಸ್ಟಿ ಸವಿತಾ ನಾಗಭೂಷಣ್ 'ಪ್ರಜಾವಾಣಿ'ಗೆ ತಿಳಿಸಿದರು.‌
'ಸ್ಥಳದಲ್ಲಿ ಬೇಟೆಗಾರರ ಹಾವಳಿ ಅಧಿಕವಾಗಿದ್ದು, ಇವರು ಅಡಗಿಸಿಟ್ಟ ಸಿಡಿಮದ್ದನ್ನು ತಿಂದೇ ಹಸು ಸತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು' ಎಂದು ಹೆಸರು ಬಹಿರಂಗಪಡಿಸಲು ಬಯಸದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹಸು ಮಾಲೀಕರಾದ ನರಸಿಂಹೇಗೌಡ ಅವರ ಪುತ್ರ ಶಶಿಕುಮಾರ್, 'ಅರಣ್ಯ ಇಲಾಖೆಯ ಅಧಿಕಾರಿಗಳು ಸಿಡಿಮದ್ದಿನ ಮೂಲವನ್ನು ಪತ್ತೆ ಹಚ್ಚಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು' ಎಂದು ಒತ್ತಾಯಿಸಿದ್ದಾರೆ.