ಇದೀಗ ಬಂದ ಸುದ್ದಿ:ಬಿಜೆಪಿ ಕಾರ್ಯಕರ್ತ ನೇಣು ಬಿಗಿದು ಸಾವು.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ರಾಮನಗರ ಪ್ರದೇಶದ ಬಿಜೆಪಿಯ ಬೂತ್‌ ಅಧ್ಯಕ್ಷ ಪೂರ್ಣಚಂದ್ರ ದಾಸ್‌ (44) ಮೃತ ವ್ಯಕ್ತಿ. 'ಪೂರ್ಣಚಂದ್ರ ದಾಸ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ,' ಎಂದು ಬಿಜೆಪಿ ಆರೋಪಿಸಿದೆ. 'ತಮ್ಮ ಪಕ್ಷಕ್ಕೆ ಸೇರಲು ನಿರಾಕರಿಸಿದ ಪೂರ್ಣಚಂದ್ರ ಅವರನ್ನು ತೃಣಮೂಲ ಕಾಂಗ್ರಸ್ಸಿನ ಗೂಂಡಾಗಳು ಕೊಂದಿದ್ದಾರೆ,' ಎಂದು ಬಿಜೆಪಿ ಆರೋಪ ಹೊರಿಸಿದೆ.
ಬಿಜೆಪಿ ಮಾಡಿರುವ ಆರೋಪಗಳನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ' ಆರೋಪ ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ' ಎಂದಿರುವ ಟಿಎಂಸಿ, 'ಪೊಲೀಸ್ ತನಿಖೆಯು ಸತ್ಯವನ್ನು ಹೊರಗೆಳೆಯುತ್ತದೆ,' ಎಂದಿದೆ.
ಟಿಎಂಸಿಯಿಂದ ಒತ್ತಡವಿತ್ತು: ಕುಟುಂಬ ಸದಸ್ಯರು
'ಸ್ಥಳೀಯ ಟಿಎಂಸಿ ನಾಯಕರು ತಮ್ಮ ಪಕ್ಷಕ್ಕೆ ಸೇರುವಂತೆ ಪೂರ್ಣಚಂದ್ರ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಅವರು ನಿರಾಕರಿಸಿದ್ದರು. ಇಂದು ಟಿಎಂಸಿ ನಾಯಕರೊಂದಿಗೆ ಸಭೆಯೂ ನಡೆದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಮಗೆ ನ್ಯಾಯಬೇಕು,' ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಬಿಜೆಪಿಯ ಹಿರಿಯ ಮುಖಂಡ ಮತ್ತು ಶಾಸಕ ದೇಬೇಂದ್ರ ನಾಥ್ ರೇ ಅವರು ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಅವರ ಮನೆಯ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಬೇಂದ್ರ ನಾಥ್‌ ಅವರನ್ನು ಇದೇ ಟಿಎಂಸಿ ಕೊಲೆ ಮಾಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.