ಅವ್ಯವಹಾರದ ದಾಖಲೆ ಬಿಚ್ಚಿಟ್ಟ ಸಿದ್ದು! ಈ ದಾಖಲೆ ಈ ರೀತಿ ಇದೆ,ಇದರಲ್ಲಿ ಎಷ್ಟು ಸುಳ್ಳು ಗೊತ್ತಾ?

ಬೆಂಗಳೂರು: ಕೋವಿಡ್‌ ಚಿಕಿತ್ಸೆಗಾಗಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆರೋಪಗಳಿಗೆ ಕೆಲವೊಂದು ದಾಖಲೆಗಳನ್ನು ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಬಿಡುಗಡೆ ಮಾಡಿದರು.

ರಾಜ್ಯ ಸರ್ಕಾರ ಕಾರ್ಮಿಕ, ಸಮಾಜ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗಿರುವ ಹಗರಣಗಳ ಕುರಿತಾಗಿ ಕೆಲವೊಂದು ದಾಖಲೆಗಳನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಈ ಕುರಿತಾಗಿ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪಿಪಿಇ ಕಿಟ್‌, ವೆಂಟಿಲೇಟರ್‌, ಸ್ಯಾನಿಟೈಸರ್‌, ಆಕ್ಸೀ ಮೀಟರ್‌ ಖರೀದಿಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ, ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರವನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಅಂಕಿ ಅಂಶಗಳ ಜೊತೆಗೆ ದಾಖಲೆಯನ್ನು ನೀಡಿದ ಸಿದ್ದರಾಮಯ್ಯ ಸರ್ಕಾರ ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಹೇಗೆ ಭ್ರಷ್ಟಾಚಾರ ನಡೆಸಿದೆ ಎಂಬ ಕುರಿತಾಗಿ ದಾಖಲೆಗಳ ಜೊತೆಗೆ ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರ ಸರ್ಕಾರ 50 ಸಾವಿರ ವೆಂಟಿಲೇಟರ್‌ಗಳನ್ನು 4 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ತಮಿಳುನಾಡು ಸರ್ಕಾರ ವೆಂಟಿಲೇಟರ್ ಪ್ರತೀ ಯುನಿಟ್‌ಗೆ 4.78 ಲಕ್ಷ ನೀಡಿದೆ. ಆದರೆ ಕರ್ನಾಟಕ ಸರ್ಕಾರ ಕನಿಷ್ಠ 5.6 ಲಕ್ಷರಿಂದ 18.20 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದೆ. ಆದರೆ ಖರೀದಿ ಮಾಡಿರುವ ವೆಂಟಿಲೇಟರ್‌ ಗುಣಮಟ್ಟ ಕಳಪೆಯಾಗಿವೆ ಎಂದು ಆರೋಪಿಸಿದೆ. ಮಾರುಕಟ್ಟೆ ದರಕ್ಕಿಂತ ಅಧಿಕ ಹಾಗೂ ಬೇರೆ ಕಡೆಗಳಲ್ಲಿ ಉಪಯೋಗ ಮಾಡಿರುವ ವೆಂಟಿಲೇಟರ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸುವ ಪಿಪಿಇ ಕಿಟ್‌ ಖರೀದಿಯಲ್ಲೂ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರೋಗ್ಯ ಸಚಿವರ ಪ್ರಕಾರ 9.65 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್‌ ಸರ್ಜಿ ಎಂಬ ಕಂಪನಿಯಿಂದ ಸುಮಾರು 3.50 ಲಕ್ಷ ಪಿಪಿಇ ಕಿಟ್‌ ಖರೀದಿಸಲಾಗಿದೆ. ಆದರೆ ಇವು ಕಳಪೆ ಗುಣಮಟ್ಟದವು ಎಂಬ ಕಾರಣಕ್ಕಾಗಿ 1.25 ಲಕ್ಷ ಪಿಪಿಇ ಕಿಟ್‌ಗಳನ್ನು ವಾಪಸ್ ಮಾಡಲಾಗಿದೆ. ಇದೇ ಕಂಪನಿಯಿಂದ ಏಪ್ರಿಲ್ 2 ರಂದು 1 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಇದಕ್ಕೆ 2,117 ರೂಪಾಯಿ ನೀಡಲಾಗಿದೆ. ಅಷ್ಟೇ ಅಲ್ಲದೆ ಇದೇ ಕಂಪನಿಗೆ 330 ರೂಪಾಯಿ ನೀಡಿಯೂ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮಾಸ್ಕ್‌ ಖರೀದಿಯಲ್ಲೂ ಅವ್ಯವಹಾರ ನಡೆದಿದ್ದು ಮಾರುಕಟ್ಟೆ ದರ 50-60 ರೂಪಾಯಿ ಇದ್ದರೂ ಸುಮಾರು ಹತ್ತು ಲಕ್ಷ ಮಾಸ್ಕ್‌ಗಳನ್ನು 126 ರೂಪಾಯಿಗಳಿಂದ 150 ರೂಪಾಯಿ ನೀಡಿ ಖರೀದಿ ಮಾಡಲಾಗಿದೆ. ಅಲ್ಲದೆ ಕಳಪೆ ಗುಣಮಟ್ಟದ ಮಾಸ್ಕ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಧರ್ಮಲ್‌ ಸ್ಕ್ಯಾನರ್‌ ಖರೀದಿಯಲ್ಲೂ ಅವ್ಯವಹಾರಧರ್ಮಲ್‌ ಸ್ಕ್ಯಾನರ್‌ ಖರೀದಿಯಲ್ಲೂ ಅವ್ಯವಹಾರ ನಡೆದಿದ್ದು ಮಾರುಕಟ್ಟೆಯಲ್ಲಿ 2 ರಿಂದ 3 ಸಾವಿರ ರೂಪಾಯಿಗಳಿಗೆ ಈ ಉಪಕರಣ ಸಿಗುತ್ತಿದ್ದರೂ ಆರೋಗ್ಯ ಇಲಾಖೆ 5,945 ರೂಪಾಯಿಗನ್ನು ನೀಡಿ ಖರೀದಿಸಿದೆ. ಇದೇ ಥರ್ಮಲ್ ಸ್ಕ್ಯಾನರ್‌ಗಳನ್ನು ಸಮಾಜ ಕಲ್ಯಾಣ ಇಲಾಖೆ 9 ಸಾವಿರ ನೀಡಿ ಖರೀದಿ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇನ್ನು ಸ್ಯಾನಿಟೈಸರ್‌ಗೆ ಮಾರುಕಟ್ಟೆಯಲ್ಲಿ 80-100 ರೂಪಾಯಿ ಇದ್ದು ಇದಕ್ಕೆ 250 ರೂಪಾಯಿ ನೀಡಿ ಖರೀದಿ ಮಾಡಲಾಗಿದೆ. ಇನ್ನು ಸಮಾಜ ಕಲ್ಯಾಣ ಇಲಾಖೆ ಇದೇ 500 ಎಂಎಲ್‌ ಬಾಟಲಿಗೆ 600 ರೂಪಾಯಿ ನೀಡಿ ಖರೀದಿಸಿದೆ ಎಂದು ದಾಖಲೆಗಳ ಜೊತೆಗೆ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಜೊತೆಗೆ ಆಕ್ಸಿಜನ್‌ ಉಪಕರಣವನ್ನು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್ ಹೌಸಿಂಗ್‌ ಸೊಸೈಟಿ 300 ಉಪಕರಣಗಳ ಖರೀದಿ ದರ ಹಾಗೂ ಕೇರಳ ಮೆಡಿಕಲ್‌ ಸರ್ವಿಸ್‌ ಕಾರ್ಪೊರೇಷನ್ ಖರೀದಿಸಿರುವ ದರದ ನಡುವೆ ಸಾಕಷ್ಟು ವೆತ್ಯಾಸವಿದೆ. ಕೇರಳದಲ್ಲಿ 2,86,961 ಲಕ್ಷಕ್ಕೆ ಖರೀದಿ ಮಾಡಿದರೆ ಕರ್ನಾಟಕದಲ್ಲಿ 4,36,800 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ಈ ಎಲ್ಲಾ ಖರೀದಿಯಲ್ಲಿ ಒಟ್ಟು 2000 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಹೈ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಈ ಆರೋಪಗಳನ್ನು ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ದಾಖಲೆಗಳ ಜೊತೆಗೆ ಮಾಡಿರುತ್ತಾರೆ. ಸಿದ್ದರಾಮಯ್ಯ ಇದೇ ಆರೋಪಗಳನ್ನು ದಾಖಲೆಗಳ ಜೊತೆಗೆ ಇದೀಗ ಮಾಡಿದ್ದಾರೆ. ಈ ಕುರಿತಾಗಿ ಎಸಿಬಿಯಲ್ಲೂ ದೂರು ದಾಖಲಾಗಿದೆ. ಅಲ್ಲದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್‌ಕೆ ಪಾಟೀಲ್‌ ತನಿಖೆಗೆ ಅವಕಾಶ ಕೋರಿ ಸ್ಪೀಕರ್‌ಗೆ ಪತ್ರವನ್ನು ಬರೆದಿದ್ದಾರೆ. ಆದರೆ ಸರ್ಕಾರ ಯಾವುದಕ್ಕೂ ಅನುಮತಿ ನೀಡಿಲ್ಲ. ಇದೀಗ ಸಿದ್ದರಾಮಯ್ಯ ಈ ಹಗರಣದ ಆರೋಪವನ್ನು ಜನರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಮುಂದಾಗಿದ್ದಾರೆ.