ಬೆಂಗಳೂರು: ಇಂದು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಟಿ ನಡೆಸಿದ ಕಂದಾಯ ಸಚಿವ ಆರ್. ಅಶೋಕ್.. ಭೂ ಸುಧಾರಣಾ ಕಾಯಿದೆ ರೈತ ವಿರೋಧಿ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಇಡೀ ದೇಶದಲ್ಲಿ ಎಲ್ಲೂ ಇಲ್ಲ ಈ ಕಾಯಿದೆ.. ಅಂದರೆ ಅವರು ದಡ್ಡರು, ನಾವು ಬುದ್ಧಿವಂತರಾ? ಅಗ್ರಿಕಲ್ಚರಲ್ ಎಕ್ಸಪೋರ್ಟ್ ಮಾಡುವುದರಲ್ಲಿ ನಾವು ಹಿಂದುಳಿದಿದ್ದೇವೆ. ತಮಿಳುನಾಡು, ಮಹಾರಾಷ್ಟ್ರ ಈಗ ಮುಂದೆ ಇದೆ. ನಮಗಿಂತ ಮುಂದೆ ಅನ್ಯ ರಾಜ್ಯಗಳು ಅಗ್ರಿಕಲ್ಚರಲ್ ಎಕ್ಸಪೋರ್ಟ್ ಮಾಡುತ್ತಿವೆ. ಹೀಗಾಗಿ ಈ ಕಾಯಿದೆ ಜಾರಿಗೆ ತಂದಿದ್ದೇವೆ ಎಂದರು.
ಕಾಂಗ್ರೆಸ್‌ನವರು ತಂದ ಕಾಯಿದೆ ಬದಲಿಸಬಾರದು ಎನ್ನುವುದು ಸಿದ್ಧರಾಮಯ್ಯರ ಉದ್ದೇಶ. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿದೆ. ವಿದ್ಯಾವಂತರು ಕೃಷಿ ಕಡೆ ಬರಬೇಕು ಅನ್ನುವ ಉದ್ದೇಶದಿಂದ ಈ ಕಾಯಿದೆಗೆ ತಿದ್ದುಪಡಿ ತಂದಿದ್ದೇವೆ. ಸಿದ್ದರಾಮಯ್ಯ ನಿಜವಾಗಲೂ ಮಲ್ಕೊಂಡಿದ್ರೆ ನಾನು ಅವರನ್ನು ಎಬ್ಬಿಸುತ್ತೇನೆ. ಆದರೆ ಮಲಗಿಕೊಂಡಿರುವವರ ತರಹ ನಾಟಕ ಮಾಡೋರನ್ನು ಎಂದಿಗೂ ಎಬ್ಬಿಸೋಕೆ ಆಗುವುದಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದರು.
ನಿಮ್ಮ ಸರ್ಕಾರ ಇದ್ದಾಗ ಎಷ್ಟು ಜಮೀನು ವಶಕ್ಕೆ ತಗೊಂಡಿದ್ದೀರಿ? ಹಣ ವಸೂಲಿಗೆ ಮಾತ್ರ ಈ ಭೂ ಸುಧಾರಣಾ ಕಾಯಿದೆ ಇತ್ತು. ನೂರು ಎಕರೆನಾದರೂ ವಶಕ್ಕೆ ತಗೊಂಡಿದ್ದಾರಾ? ಕೇಸ್ ಹಾಕಿ ಬರಿ ವಸೂಲಿ ಮಾಡೋದಷ್ಟೇ ಆಯ್ತು.. ಹೀಗಾಗಿ ಅಧಿಕಾರಿಗಳ ಶೋಷಣೆಗೆ ಬ್ರೇಕ್ ಹಾಕಲು ಈ ಕಾಯಿದೆ ತಂದಿದ್ದೇವೆ. ಸಿದ್ದರಾಮಯ್ಯ ಹೇಳೋದು ನೋಡಿದರೆ.. ಕಾಯಿದೆ ತೆಗೆದು ಹಾಕಿರುವ ತಮಿಳುನಾಡು, ಆಂಧ್ರಪ್ರದೇಶ ಮುಳುಗಿ ಹೋಗಿ ಬಿಡಬೇಕಿತ್ತು. 45 ವರ್ಷ ಇದ್ರಲ್ಲರಪ್ಪಾ? ಎಲ್ಲಿ ಆದಾಯ ತಂದಿದ್ದೀರಾ ಸರ್ಕಾರಕ್ಕೆ? ಯಾವ ಭೂಮಿ ಮುಟ್ಟುಗೋಲು ಹಾಕಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.