ಇದೀಗ ಬಂದ ಸುದ್ದಿ:ಡಿಕೆಶಿ ಹಾಗೂ ಸಿದ್ದು ನಡುವೆಯೇ ಭಿನ್ನಾಭಿಪ್ರಾಯ ಕಾರಣವೇನು ಗೊತ್ತಾ?

ಬೆಂಗಳೂರು: ಕೊರೊನಾ ಸಾಮಗ್ರಿಗಳ ಖರ್ಚು ವೆಚ್ಚದಲ್ಲಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡಿರೊ ಕಾಂಗ್ರೆಸ್​​​ನಲ್ಲಿ ನಾಯಕರ ನಡುವೆಯೇ ಅಸಮನ್ವಯತೆ ಕಾಣ್ತಿದೆ. ಒಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ 'ಲೆಕ್ಕಕೊಡಿ' ಅಭಿಯಾನ ಮಾಡ್ತಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ 'ಉತ್ತರಕೊಡಿ' ಅನ್ನೋ ಅಭಿಯಾನ ಶುರುಮಾಡಿದ್ದಾರೆ.
ಸಿದ್ದರಾಮಯ್ಯನವರ ಲೆಕ್ಕ ಕೊಡಿ ಅಭಿಯಾನದ ಮುಂದುವರಿಕೆ ಬಗ್ಗೆ ಪ್ರಶ್ನಿಸಿದಾಗ, ಅವರು ಲೆಕ್ಕಕೊಡಿ ಅಂತ ಕೇಳಿದ್ದಾರೆ, ನಾನು ಉತ್ತರ ಕೊಡಿ ಅಂತ ಕೇಳಿದ್ದೇನೆ' ಅಂತ ಡಿಕೆ ಶಿವಕುಮಾರ್ ಉತ್ತರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕವಾಗಿ #ಉತ್ತರಕೊಡಿ ಅಭಿಯಾನ ಆರಂಭಿಸುವ ಮೂಲಕ ಸಾಂಘಿಕತೆಯಿಂದ ಒಂದೇ ಅಭಿಯಾನಕ್ಕೆ ಬಲ ತುಂಬಲು ನಾಯಕರು 'ಕೈ' ಜೋಡಿಸದಿರುವುದು ಸ್ಪಷ್ಟವಾಗಿದೆ.
ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಲ್ಲೂ ನಾಯಕರ ನಡುವೆ ಒಡಕು ಮೂಡಿದೆ. 'ಕೋವಿಡ್ ಸೋಂಕಿತರಿಗೆ ಸರ್ಕಾರ ಸಮರ್ಪಕ ಚಿಕಿತ್ಸೆ ನೀಡ್ತಿಲ್ಲ' ಎಂದು ಸಿದ್ದರಾಮಯ್ಯ ದನಿ ಎತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ ವೇಳೆ, ಸೋಂಕಿತರಿಗೆ ಒಳ್ಳೆಯ ಚಿಕಿತ್ಸೆ ನೀಡಲಾಗ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ರು. ಇದರಿಂದ ಕಾಂಗ್ರೆಸ್​​ನ ಪ್ರಮುಖ ನಾಯಕರ ನಡುವೆಯೇ ಒಕ್ಕೊರಲ ದನಿ ಇಲ್ಲದಿರೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.
ಕೈ ಪಕ್ಷದ ನಾಯಕರ ಹೇಳಿಕೆ 'ಎತ್ತು ಏರಿಗೆ.. ಕೋಣ ನೀರಿಗೆ' ಎಂಬಂತಿದೆ. ಪ್ರತಿ ವಿಚಾರದಲ್ಲೂ ತನಗೇ ಕ್ರೆಡಿಟ್ ಸಿಗಬೇಕೆಂಬ ಪ್ರತಿಷ್ಟೆಯನ್ನೇ ದೊಡ್ಡದು ಮಾಡಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ.