ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲಾ ಸಚಿವರ ಮೌಲ್ಯಮಾಪನ ಮಾಡಲಾಗುತ್ತದೆ ಅಂತಾ ಬಿಜೆಪಿ ಹೈಕಮಾಂಡ್ ಹೇಳಿತ್ತು. ಅಲ್ಲದೇ ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಅನೇಕ ಬಾರಿ ಹೇಳಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಂತಹ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳದಿರುವುದರಿಂದ ಸದ್ಯಕ್ಕೆ ಬಿಎಸ್ವೈ ಸರ್ಕಾರದ ಕೆಲ ಸಚಿವರು ಬಚಾವ್ ಆಗಿದ್ದಾರೆ ಎನ್ನಲಾಗ್ತಿತ್ತು ಆದರೆ ಮೂಲಗಳ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಮಂತ್ರಿಗಳ ಮೌಲ್ಯಮಾಪನ ನಡೆಯಲಿದೆಯಂತೆ.
ಆರ್‌ಎಸ್‌ಎಸ್‌ನಿಂದ ಸಚಿವರ ಗೌಪ್ಯ ಮೌಲ್ಯಮಾಪನ ನಡೆಯಲಿದೆಯಂತೆ. ಸರ್ಕಾರ ರಚನೆಯಾದಾಗ ಸಂಪುಟ ರಚನೆ ಸಂದರ್ಭದಲ್ಲಿ ಕ್ಯಾಬಿನೆಟ್ ಸೇರಿದ ಎಲ್ಲಾ ಮಂತ್ರಿಗಳ ಮೌಲ್ಯಮಾಪನ ನಡೆಯಲಿದೆಯಂತೆ. ಒಂದು ವರ್ಷದ ಅವಧಿಯಲ್ಲಿ ಯಾವ್ಯಾವ ಸಚಿವರುಗಳು ತಮಗೆ ನೀಡಿರುವ ಖಾತೆಯನ್ನು ಎಷ್ಟರಮಟ್ಟಿಗೆ ನಿಭಾಯಿಸಿದ್ದಾರೆ? ಖಾತೆ ನಿರ್ವಹಣೆಯಲ್ಲಿ ಮುಂದಿದ್ದಾರಾ? ಹಿಂದೆ ಬಿದ್ದಿದ್ದಾರಾ? ಈ ಸಚಿವರನ್ನು ಸಂಪುಟದಲ್ಲಿಯೇ ಮುಂದುವರಿಕೆ ಮಾಡಿದ್ರೆ ಸರ್ಕಾರಕ್ಕೆ ಆಗುವ ಲಾಭ, ನಷ್ಟಗಳೇನು? ಹೀಗೆ ಹಲವು ವಿಚಾರಗಳ ಬಗ್ಗೆ ಮೌಲ್ಯಮಾಪನವನ್ನ ಆರ್‌ಎಸ್‌ಎಸ್ ಮಾಡಲಿದೆಯಂತೆ.
ಬಳಿಕ ಮೌಲ್ಯಮಾಪನದ ವರದಿಯನ್ನ ಹೈಮಾಂಡ್ ನಾಯಕರಿಗೆ ಒಪ್ಪಿಸಲಿದ್ದಾರೆ. ಈ ವರದಿ ಆಧಾರದ ಮೇಲೆ ಯಾರೆಲ್ಲಾ ಸಚಿವರಾಗಿ ಮುಂದುವರೆಯಬೇಕು? ಯಾರೆಲ್ಲಾ ಕ್ಯಾಬಿನೆಟ್‌ನಿಂದ ಹೊರ ಹೋಗಬೇಕು? ಅನ್ನೋದನ್ನ ಹೈಕಮಾಂಡ್ ನಾಯಕರ ತೀರ್ಮಾನಿಸಲಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್‌ನ ಮೌಲ್ಯಮಾಪನದ ಮೇಲೆ ಸಚಿವರುಗಳ ಭವಿಷ್ಯ ನಿಂತಿದೆ ಅಂತಾ ಹೇಳಲಾಗುತ್ತಿದೆ.