ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಹೇಳುವ ಗುಂಪು ಮತ್ತು ಅದನ್ನು ವಿರೋಧಿಸುವ, ಈ ಎರಡೂ ಬಣಗಳು, ರಾಜ್ಯ ಕಾಂಗ್ರೆಸ್ ನಲ್ಲಿರುವುದು ತಿಳಿದಿರುವ ವಿಚಾರ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡಾಗ, ಖರ್ಗೆ ಸಿಎಂ ಆಗಬೇಕು ಎನ್ನುವ ವಿಚಾರ ಮುನ್ನಲೆಗೆ ಬಂದಿತ್ತು. ಆದರೆ, ಬಿಜೆಪಿ, ಆಪರೇಶನ್ ಕಮಲದ ಮೂಲಕ, ಅಧಿಕಾರಕ್ಕೇರಿದ ನಂತರ, ಆ ವಿಚಾರ ಅಲ್ಲಿಗೇ ತಣ್ಣಗಾಯಿತು.
ಒಂದು ದಿನದ ಹಿಂದೆ (ಜುಲೈ 29) ಮಾಜಿ ಸಿಎಂ ಕುಮಾರಸ್ವಾಮಿ, ಖರ್ಗೆ ವಿಚಾರವನ್ನು ಮತ್ತೆ ಪ್ರಸ್ತಾವಿಸಿದ ನಂತರ, ಈ ವಿಷಯ ಮತ್ತೆ ಚರ್ಚೆಯ ವಸ್ತುವಾಗಿದೆ. ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಾ, ಎಚ್ಡಿಕೆ, ಖರ್ಗೆ ವಿಚಾರವನ್ನು ಎಳೆದು ತಂದಿದ್ದಾರೆ.
"ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ, ದೇವೇಗೌಡ್ರು, ಖರ್ಗೆ ಹೆಸರನ್ನು ಸಿಎಂ ಹುದ್ದೆಗೆ ಪ್ರಸ್ತಾವಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರೇ ಅದನ್ನು ವಿರೋಧಿಸಿದ್ದರು"ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಖರ್ಗೆ, ಸಿಎಂ ಆಗಲಿ ಎಂದಿದ್ದರು
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ಸಿನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು" ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ಪರೋಕ್ಷವಾಗಿ ಖರ್ಗೆಯವರನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಹೇಳಿಕೆ
'ಕಳೆದ ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಎನ್ನುವ ವಿಚಾರ ಅಪ್ರಸ್ತುತ'ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದರು. ಪರೋಕ್ಷವಾಗಿ ಖರ್ಗೆಯವರನ್ನು ಉಲ್ಲೇಖಿಸಿ, ಸಿದ್ದರಾಮಯ್ಯ ಈ ಹೇಳಿಕೆಯನ್ನು ನೀಡಿದ್ದರು. ಆ ಹೇಳಿಕೆಗೆ, 'ದಲಿತ ಎನ್ನುವ ಕಾರಣಕ್ಕಾಗಿ ನನಗೆ ಸಿಎಂ ಪಟ್ಟ ಬೇಡ' ಎನ್ನುವ ಪ್ರತಿಕ್ರಿಯೆಯನ್ನೂ ಖರ್ಗೆ ನೀಡಿದ್ದರು.
ಸಿದ್ದರಾಮಯ್ಯನವರ ಮನವೊಲಿಸುವ ಕೆಲಸ ರಮೇಶ್ ಕುಮಾರ್ ಅವರಿಗೆ
ಕಳೆದ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶದ ನಂತರ, ಬಿಜೆಪಿಗೆ ಅಧಿಕಾರ ನಡೆಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು, ಖರ್ಗೆಯವರನ್ನು ಸಿಎಂ ಮಾಡುವ ವಿಚಾರ ಚರ್ಚೆಯಾಗಿತ್ತು. ಸಿದ್ದರಾಮಯ್ಯನವರ ಮನವೊಲಿಸುವ ಕೆಲಸವನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ವಹಿಸಲಾಗಿತ್ತು ಎನ್ನುವ ಮಾತು ಕೇಳಿ ಬಂದಿತ್ತು.
ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ
ಕಳೆದ ಅಸೆಂಬ್ಲಿ ಉಪಚುನಾವಣೆಯ ಕೆ.ಆರ್.ಪುರಂ ಕ್ಷೇತ್ರದ ಪ್ರಚಾರದ ವೇಳೆಯೂ ಸಿದ್ದರಾಮಯ್ಯ ಮತ್ತು ಖರ್ಗೆಯವರ ನಡುವೆ ಅಷ್ಟಕಷ್ಟೇ ಎನ್ನುವ ವಿಚಾರ ಬಯಲಾಗಿತ್ತು. ಖರ್ಗೆ ಅವರು ಭಾಷಣ ಮುಗಿಸುವವರೆಗೂ ಸಿದ್ದರಾಮಯ್ಯ ಪ್ರಚಾರದ ವಾಹನ ಏರಿರಲಿಲ್ಲ. ಕುಮಾರಸ್ವಾಮಿ, ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು ಎಂದು ಹೆಸರು ಉಲ್ಲೇಖಿಸದೇ ಹೇಳಿದ್ದರು. ಹೀಗಾಗಿ, ಎಚ್ಡಿಕೆ ಹೇಳಿದ ನಾಯಕರಾರು ಎನ್ನುವುದನ್ನು ಗ್ರಹಿಸಿಕೊಳ್ಳಬೇಕಾಗಿದೆ.
Comments
Post a Comment