ಬಿಜೆಪಿಯಿಂದ ಪ್ರಧಾನಿ ಪಟ್ಟ ಅಲಂಕರಿಸಿದ ಅಟಲ್ ಬಿಹಾರಿ ವಾಜಪೇಯಿ 2,268 ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮೋದಿ ಈ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಬಿಜೆಪಿಯಿಂದ ಅತೀ ಹೆಚ್ಚು ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊದಲಿಗ ಅನ್ನೋ ದಾಖಲೆ ಬರೆದಿದ್ದಾರೆ.
ಭಾರತದ ಪ್ರಧಾನಿಯಾಗಿ ಅತೀ ಹೆಚ್ಚು ದಿನ ಸೇವೆ ಸಲ್ಲಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಜವಾಹರ್ ಲಾಲ್ ನೆಹರುವಿಗೆ ಸಲ್ಲಲಿದೆ. ನೆಹರು ಬರೋಬ್ಬರಿ 16 ವರ್ಷ 286 ದಿನ ಪ್ರಧಾನಿಯಾಗಿದ್ದರು. ಎರಡನೇ ಸ್ಥಾನವನ್ನು ಇಂದಿರಾ ಗಾಂಧಿ ಅಲಂಕರಿಸಿದ್ದಾರೆ. ನೆಹರು ಪುತ್ರಿ ಇಂದಿರಾ ಗಾಂಧಿ 11 ವರ್ಷ 59 ದಿನ ಪ್ರಧಾನಿಯಾಗಿದ್ದರು. 3ನೇ ಸ್ಥಾನದಲ್ಲಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಪಾತ್ರರಾಗಿದ್ದಾರೆ. ಮನ್‌ಮೋಹನ್ ಸಿಂಗ್ 10 ವರ್ಷ 4 ದಿನ ಪ್ರಧಾನಿಯಾಗಿದ್ದರು. ನಾಲ್ಕನೇ ಸ್ಥಾನದಲ್ಲಿದ್ದ ಅಟಲ್ ಬಿಹಾರಿ ವಾಜಪೇಯ್ ಅವರನ್ನು ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. ಮೊದಲ ಮೂರು ಸ್ಥಾನದಲ್ಲಿ ಕಾಂಗ್ರೆಸ್ ಪ್ರಧಾನಿಗಳು ರಾರಾಜಿಸುತ್ತಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ 6 ವರ್ಷ ಪೂರೈಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ, 2019ರ ಚುನಾವಣೆಯಲ್ಲಿ 303 ಸ್ಥಾನ ಗೆಲ್ಲೋ ಮೂಲಕ ಅಭೂತಪೂರ್ವ ಗೆಲುವಿನ ಮೂಲಕ 2ನೇ ಬಾರಿ ಪ್ರಧಾನಿಯಾಗಿದ್ದರು.

Comments
Post a Comment