ಕುಂದಾಪುರದ ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತದ ಗದ್ದುಗೆ ಏರಿದ್ದಾರೆ.
ಭಾನುವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಅವಧಿಯಲ್ಲೂ ಕೂಡ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ ಸದಸ್ಯರು ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಪೈಪೋಟಿ ನೀಡಿತ್ತು. ಆದರೂ ಕೂಡ ಈ ಹಿಂದಿನ ಅಧಿಕಾರಾವಧಿಯಲ್ಲಿ ಸದಸ್ಯರು ಜನರಿಗೆ ನೀಡಿದ ಸೇವೆಗೆ ಮತ್ತೊಮ್ಮೆ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿದಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಚಂದ್ರ ನಾಯ್‌್ಕ-715 ಮತ, ಶರತ್ ಕುಮಾರ್ ಶೆಟ್ಟಿಬಾಳಿಕೆರೆ- 701 ಮತ, ಆನಂದ್ ಪಿ.ಎಚ್.- 676 ಮತ, ಅಂತೋನಿ ಲೂಯಿಸ್- 671 ಮತ, ಚಂದ್ರ ಪೂಜಾರಿ-637 ಮತ, ಸಂತೋಷ ಕುಮಾರ್ ಶೆಟ್ಟಿತೋಟಬೈಲು- 604 ಮತ, ಚಂದ್ರಶೇಖರ ಪೂಜಾರಿ- 603 ಮತ, ಹಿಂದುಳಿದ ವರ್ಗದಿಂದ ಸ್ಪರ್ದಿಸಿದ ಎಚ್. ರಾಜೀವ ದೇವಾಡಿಗ-805 ಮತ, ಹಕ್ಲಾಡಿ ಸಂತೋಷ ಕುಮಾರ್ ಶೆಟ್ಟಿ- 824 ಮತ, ಮಹಿಳಾ ಮೀಸಲಾತಿಯಿಂದ ಸ್ಪರ್ಧಿಸಿದ ಚಂದ್ರಮತಿ ಹೆಗ್ಡೆ-675ಮತ, ಸಾಧು ಎಸ್. ಬಿಲ್ಲವ- 611 ಮತ, ಪರಿಶಿಷ್ಟಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಅನಂತ ಮೋವಾಡಿ-837 ಮತ, ಪರಿಶಿಷ್ಟಪಂಗಡ ಸ್ಥಾನದಿಂದ ಸ್ಪರ್ಧಿಸಿದ ಶಾರದಾ- 799 ಮತ ಪಡೆದಿದ್ದಾರೆ.
ಭಾನುವಾರ ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತು. ಚುನಾವಣಾ ಕೇಂದ್ರದಿಂದ ಹೆಮ್ಮಾಡಿ ಪೇಟೆಯವರೆಗೆ ಮೆರವಣಿಗೆ ಮೂಲಕ ಗೆಲುವು ಸಾಧಿಸಿದ ಸದಸ್ಯರ ಜೊತೆ ಸಾಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪರ ಘೋಷಣೆ ಕೂಗಿ ಗೆಲುವಿನ ಉತ್ಸಾಹ ಪ್ರದರ್ಶಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿಗುಡಿಬೆಟ್ಟು, ತಾ.ಪಂ. ಸದಸ್ಯರಾದ ವಾಸುದೇವ ಪೈ, ಉದಯ ಜಿ. ಪೂಜಾರಿ, ತಲ್ಲೂರು ಗ್ರಾ.ಪಂ ಅಧ್ಯಕ್ಷ ಆನಂದ ಬಿಲ್ಲವ, ಚಂದ್ರ ದೇವಾಡಿಗ, ರಾಘವೇಂದ್ರ ಪೂಜಾರಿ, ಯಾಸೀನ್ ಮುಖಂಡರಾದ ಯು. ಸತ್ಯನಾರಾಯಣ ರಾವ್, ರಾಜು ಪೂಜಾರಿ ಕಾಳೂರಮನೆ, ಜೋಗ ಪೂಜಾರಿ ಮೊದಲಾದವರು ಇದ್ದರು.
Comments
Post a Comment