ಬಿಜೆಪಿ ಸೇರಲು ಮುಂದಾದ ಕಾಂಗ್ರೆಸಿನ 10 ಕ್ಕೂ ಹೆಚ್ಚು ಮಾಜಿ ಶಾಸಕರು ಸೇರಲಿದ್ದಾರೆ...!!!



ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಧೋರಣೆಯಿಂದ ಬೇಸತ್ತು ಸುಮಾರು 10ಕ್ಕೂ ಹೆಚ್ಚು ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಬಿಜೆಪಿ ಸೇರಲು ಮುಂದಾಗಿದ್ದಾರೆ.
ಹಾಲಿ ಶಾಸಕರಲ್ಲಿ ಕೆಲವರು ಬಿಜೆಪಿಯತ್ತ ಮುಖಮಾಡಿದ್ದರೂ ಶಾಸಕ ಸ್ಥಾನ ಕಳೆದುಕೊಳ್ಳುವ ಆತಂಕದಿಂದ ಸದ್ಯಕ್ಕೆ ಪಕ್ಷದಲ್ಲೇ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ. ಮಾಜಿ ಶಾಸಕರ ಪೈಕಿ ಬಹಳಷ್ಟು ಮಂದಿ ಮೂಲ ಕಾಂಗ್ರೆಸ್ಸಿಗರು ತಮ್ಮ ಅತೃಪ್ತಿಗಳನ್ನು ಹೊರ ಹಾಕುತ್ತಿದ್ದು, ಕರ್ನಾಟಕದಲ್ಲಿ ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ. ಕೆಪಿಸಿಸಿ ಅಧ್ಯಕ್ಷರು ಹುದ್ದೆಗೆ ತಕ್ಕಂತಹ ನಡತೆಯನ್ನು ಪ್ರದರ್ಶಿಸುತ್ತಿಲ್ಲ. ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲಷ್ಟೆ ಸೀಮಿತವಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮೊಂದಿಗೆ ಕಾಂಗ್ರೆಸ್‍ಗೆ ವಲಸೆ ಬಂದ ಕೆಲವು ನಾಯಕರ ಹಿತಾಸಕ್ತಿ ಕಾಪಾಡಲು ಮಾತ್ರ ಒತ್ತು ನೀಡುತ್ತಿದ್ದಾರೆ. ಮೇಲಾಗಿ ಇಡೀ ಪಕ್ಷವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನಿಷ್ಠಾವಂತ ಕಾಂಗ್ರೆಸ್ಸಿಗರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದರಿಂದ ಕಾಂಗ್ರೆಸ್‍ನ ಭವಿಷ್ಯ ಅವನತಿಯತ್ತ ಸಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇತ್ತ ನಾಯಕರೂ ಸರಿಯಿಲ್ಲ, ಹೈಕಮಾಂಡ್‍ನಲ್ಲೂ ಸತ್ವವಿಲ್ಲ ಎಂದಾದ ಮೇಲೆ ಈ ಪಕ್ಷಕ್ಕೆ ಭವಿಷ್ಯವೂ ಇಲ್ಲ. ಇಲ್ಲಿರುವುದರಿಂದ ನಮ್ಮ ರಾಜಕೀಯ ಭವಿಷ್ಯವೂ ಹಾಳಾಗಲಿದೆ ಎಂಬ ಆತಂಕ ಇತ್ತೀಚೆಗೆ ನಡೆದ ಮಾಜಿ ಶಾಸಕರ ಸಭೆಯಲ್ಲಿ ವ್ಯಕ್ತವಾಗಿದೆ.
ಹೀಗಾಗಿ ಕಾಂಗ್ರೆಸ್ ಬಿಟ್ಟು ಸಾಮೂಹಿಕವಾಗಿ ಬಿಜೆಪಿಯತ್ತ ವಲಸೆ ಹೋಗುವುದು ಸೂಕ್ತ ಎಂಬ ನಿರ್ಣಯಕ್ಕೆ ಕೆಲವು ನಾಯಕರು ಬಂದಿದ್ದಾರೆ. ಬಿಜೆಪಿ ಜೊತೆ ಈಗಾಗಲೇ ಮಾತುಕತೆಗಳು ನಡೆದಿದೆ. ಕೆಲವು ಮಾಜಿ ಶಾಸಕರು ತಮ್ಮ ಕ್ಷೇತ್ರಗಳನ್ನು ಬದಲಾವಣೆ ಮಾಡಿಕೊಂಡು ಬಿಜೆಪಿ ಸೇರಲು ತಯಾರಿ ನಡೆಸಿದ್ದಾರೆ.
ಆದರೆ ಒಬ್ಬೊಬ್ಬರಾಗಿ ಹೋಗುವ ಬದಲಾಗಿ ಸಾಮೂಹಿಕವಾಗಿ ಹೋಗುವ ಮೂಲಕ ಕಾಂಗ್ರೆಸ್‍ಗೆ ಮುಜುಗರ ಉಂಟು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಷಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೂ ತಿಳಿಸಲಾಗಿದೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಮಾಜಿ ಶಾಸಕರು ಬ್ಲ್ಯಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.
ಅವರ್ಯಾರೂ ಬಿಜೆಪಿಗೆ ಹೋದರೆ ರಾಜಕೀಯವಾಗಿ ಏಳಿಗೆಯಾಗುವುದಿಲ್ಲ. ಕಾಂಗ್ರೆಸ್‍ನಲ್ಲಿ ಅಧಿಕಾರ ಅವಕಾಶ ಅನುಭವಿಸಿ ಮತ್ತೆ ತಮಗೇ ಅಧಿಕಾರ ಬೇಕು ಎಂಬ ದುರಾಸೆಯಿಂದ ನಡೆದುಕೊಳ್ಳುತ್ತಿರುವವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ.
ನಮಗೆ ಹೊಸ ನಾಯಕತ್ವ ಹುಟ್ಟು ಹಾಕಲು ಅನುಕೂಲವಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್‍ನಲ್ಲಿ ಇದರಿಂದ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

Comments