ಚುನಾವಣೆಯಲ್ಲಿ ಬಿಜೆಪಿಯಿಂದ ದಾಖಲೆಯ 28 ಸಾವಿರ ಕೋಟಿ ರು.ಖರ್ಚು; ಅದು ಕಪ್ಪು ಹಣವೇ?? ಕಾಂಗ್ರೆಸ್ ಪ್ರಶ್ನೆ



ಇತ್ತೀಚಿಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆ ಜಗತ್ತಿನಲ್ಲೇ ಅತ್ಯಂತ ದುಬಾರಿಯಾಗಿದ್ದು, ಬಿಜೆಪಿ ಖರ್ಚು ಮಾಡಿದ ದಾಖಲೆಯ 28 ಸಾವಿರ ಕೋಟಿ ರುಪಾಯಿ ಬಗ್ಗೆ ವಿವರ ನೀಡಬೇಕು ಎಂದು ಶುಕ್ರವಾರ ಕಾಂಗ್ರೆಸ್ ಒತ್ತಾಯಿಸಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮನು ಸಿಂಘ್ವಿ ಅವರು, ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ವರದಿ ಪ್ರಕಾರ, ಈ ಬಾರಿ ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಲು ಒಟ್ಟು 60 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದ್ದು, ಈ ಪೈಕಿ ಆಡಳಿತಾರೂಢ ಬಿಜೆಪಿಯೇ 28 ಸಾವಿರ ಕೋಟಿ ರು. (ಶೇ. 45ರಷ್ಟು) ಖರ್ಚು ಮಾಡಿದೆ ಎಂದರು.
ಬಿಜೆಪಿ ಲೋಕಸಭೆ ಚುನಾವಣೆಗೆ ಖರ್ಚು ಮಾಡಿದ ವೆಚ್ಚ ದೇಶದ ಶಿಕ್ಷಣ ಬಜೆಟ್ ನ ಮೂರನೇ ಒಂದು ಭಾಗದಷ್ಟು, ಆರೋಗ್ಯ ಬಜೆಟ್ ನ ಶೇ,43 ರಷ್ಟು, ರಕ್ಷಣಾ ಬಜೆಟ್ ಶೇ.10 ರಷ್ಟು ಹಾಗೂ ಉದ್ಯೋಗ ಖಾತ್ರಿ ಯೋಜನೆ ಶೇ.
45 ರಷ್ಟು ಇದೆ ಎಂದು ಸಿಂಘ್ವಿ ಹೇಳಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣ ಬಿಜೆಪಿಗೆ ಎಲ್ಲಿಂದ ಬಂತು. ಇದು ಕಪ್ಪು ಹಣವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ, ಈ ಬಗ್ಗೆ ಬಿಜೆಪಿ ವಿವರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರ ನಮಾಮಿ ಗಂಗಾ ಯೋಜನೆ(24 ಸಾವಿರ ಕೋಟಿ)ಗಿಂತ ಲೋಕಸಭೆ ಚುನಾವಣೆಗೆ ಹೆಚ್ಚು ಖರ್ಚು ಮಾಡಿದೆ. ಇದು ಪಾರದರ್ಶಕತೆಯ ವಿಚಾರ. ಎಲ್ಲಾ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶ ನೀಡಿದರೆ ಮಾತ್ರ ಚುನಾವಣೆ ಮುಕ್ತ ಮತ್ತು ಪಾರದರ್ಶಕವಾಗಿರಲು ಎಂದು ಸಿಂಘ್ವಿ ಹೇಳಿದ್ದಾರೆ.
ಚುನಾವಣಾ ವೆಚ್ಚದ ಬಗ್ಗೆ ಬಿಜೆಪಿ ಉತ್ತರಿಸಬೇಕು ಮತ್ತು ಆ ಹಣದ ಮೂಲದ ಬಗ್ಗೆ ವಿವರ ನೀಡಬೇಕು. ನೋಟು ನಿಷೇಧದ ಬಳಿಕ ಖರ್ಚು ಮಾಡಿದೆ ಅಷ್ಟೊಂದು ದೊಡ್ಡ ಮೊತ್ತದ ಆ ಹಣ ಕಪ್ಪು ಹಣವೇ ಅಥವಾ ಬಿಳಿ ಹಣವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

Comments