ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಈಗ ಶುರುವಾಗಿದೆ.
ಜೂನ್ 13 ರಂದು ಬಿಜೆಪಿ ಉನ್ನತ ಸಮಿತಿ ಸಭೆ ನಡೆಯಲಿದ್ದು, ಅಂದು ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರನ್ನೂ ಆರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ ಬಿಜೆಪಿಯ ಕೆಲವು ಮೂಲಗಳ ಪ್ರಕಾರ ಅಮಿತ್ ಶಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ. ಬದಲಾಗಿ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಿ, ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರನ್ನು ಕೂರಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ 2014 ಮತ್ತು 2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರ ಕೆಲಸ ಮಾಡಿದೆ. ಪಕ್ಷದಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಅವರ ಸ್ಥಾನಕ್ಕೆ ಸೂಕ್ತವಾಗುವಂಥ ವ್ಯಕ್ತಿಯ ಹುಡುಕಾಟದಲ್ಲಿ ಬಿಜೆಪಿ ಇದೆಯಾದರೂ, ಸದ್ಯಕ್ಕೆ ಅವರನ್ನೇ ಆ ಸ್ಥಾನದಲ್ಲಿ ಮುಂದುವರಿಸುವುದೇ ಹೆಚ್ಚು ಸೂಕ್ತ ಎಂದು ಬಿಜೆಪಿ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಜೆಪಿ ನಡ್ಡಾ ಅವರ ಹೆಸರು ಕೇಳಿ ಬರುತ್ತಿದೆ.
Comments
Post a Comment