ರಾಜನಾಥ್ ಸಿಂಗ್ ಗೆ ಬಿಸಿ ಮುಟ್ಟಿಸಿದ ಅಮಿತ್ ಶಾ



ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರದ 8 ಸಂಪುಟ ಸಮಿತಿಗಳನ್ನು ಪುನರ್ ರಚಿಸಲಾಗಿದ್ದು, ಅದರಲ್ಲಿ ಮೊದಲಬಾರಿಗೆ ಮಂತ್ರಿಯಾಗಿರುವ ಅಮಿತ್ ಶಾ ಅವರಿಗೆ ಎಲ್ಲಾ 8 ಸಮಿತಿಯಲ್ಲೂ ಸ್ಥಾನ ನೀಡಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಅವರನ್ನು ದೂರವಿಡಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.
8 ಸಂಪುಟ ಸಮಿತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 6 ಸಂಪುಟ ಸಮಿತಿಗಳಲ್ಲಿದ್ದ ಇದ್ದರೆ, ಗೃಹ ಸಚಿವ ಅಮಿತ್ ಷಾ ಎಲ್ಲ 8 ಸಮಿತಿಗಳಲ್ಲೂ ಇದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಸಂಪುಟ ಸಮಿತಿಗಳಲ್ಲಿದ್ದರೆ, ರೈಲ್ವೆ ಸಚಿವ ಪಿಯೂಶ್ ಗೋಯೆಲ್ 5 ಸಮಿತಿಗಳಲ್ಲಿ ಇದ್ದಾರೆ. ಆದರೆ ಎನ್ಡಿಎ 1ರಲ್ಲಿ ಗೃಹ ಸಚಿವರಾಗಿದ್ದು, ಎನ್ಡಿಎ 2ನಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಅವರಿಗೆ ಕೇವಲ ಎರಡು ಸಂಪುಟ ಸಮಿತಿಗಳಲ್ಲಿ ಮಾತ್ರ ಸ್ಥಾನ ನೀಡಲಾಗಿದೆ.
ಅದರಲ್ಲೂ ವಿಶೇಷವಾಗಿ ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯಲ್ಲಿ ಅವರಿಲ್ಲದಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ಸರ್ಕಾರದ ನೀತಿಯ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಾಗಿ ಈ ಸಮಿತಿಯಲ್ಲಿ ರಕ್ಷಣಾ ಸಚಿವರ ಉಪಸ್ಥಿತಿ ತುಂಬಾ ಪ್ರಮುಖವಾಗಿರುತ್ತದೆ. ಆದರೆ, ಈ ಸಮಿತಿಯಲ್ಲಿ ರಾಜನಾಥ್ ಸಿಂಗ್ ಹೊರತುಪಡಿಸಿ ಗೃಹ ಸಚಿವ ಅಮಿತ್ ಷಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಲ್ಲದೆ, ನರೇಂದ್ರ ತೋಮರ್, ರವಿಶಂಕರ್ ಪ್ರಸಾದ್, ಹರ್ಷವರ್ಧನ್, ಪಿಯೂಶ್ ಗೋಯೆಲ್, ಪ್ರಲ್ಹಾದ್ ಜೋಷಿ ಮತ್ತು ಮಿತ್ರಪಕ್ಷಗಳ ರಾಮ್ ವಿಲಾಸ್ ಪಾಸ್ವಾನ್, ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಅರವಿಂದ ಸಾವಂತ್ ಅವರಿಗೆ ಸ್ಥಾನ ನೀಡಲಾಗಿದೆ.

Comments