Breaking news !! ರಮೇಶ್ ಜಾರಕಿಹೊಳೆ ಜೊತೆ ನಾನು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವೆ , ರಮೇಶ್ ಮನೆಯಲ್ಲಿ ಗುಪ್ತ ಸಭೆ



-ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿ ಹೊಳಿ ಶನಿವಾರ ತಮ್ಮ ಆಪ್ತ ಶಾಸಕರ ಸಭೆ ಕರೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನಗರದ ಸೆವೆನ್ ಕ್ವಾಟ್ರರ್ಸ್‍ನಲ್ಲಿರುವ ರಮೇಶ್ ಜಾಕಿ ಹೊಳಿ ತಮ್ಮ ಆಪ್ತ ಶಾಸಕರ ಜೊತೆ ಸಭೆ ನಡೆಸಲಿದ್ದು, ಕಾಂಗ್ರೆಸ್‍ಗೆ ಅಧಿಕೃತವಾಗಿ ಗುಡ್‍ಬೈ ಹೇಳಿ ಬಿಜೆಪಿಯನ್ನು ಸೇರಲಿದ್ದಾರೆಯೇ ಎಂಬ ಕೂತುಹಲ ಮೂಡಿದೆ.
ಒಂದೆಡೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿ ಹೊಳಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಶತಪ್ರಯತ್ನ ನಡೆಸಿರುವ ಬೆನ್ನಲ್ಲೇ ಬಿಜೆಪಿಯವರು ರಮೇಶ್ ಜಾರಕಿ ಹೊಳಿ ಮತ್ತು ಅವರ ಆಪ್ತರನ್ನು ಸೆಳೆದು ಸಮ್ಮಿಶ್ರ ಸರ್ಕಾರಕ್ಕೆ ಖೆಡ್ಡಾ ತೋಡುವ ಮುಹೂರ್ತವನ್ನು ನಿಗದಿಪಡಿಸಲು ಮುಂದಾಗಿದ್ದಾರೆ.
ಎರಡು ದಿನಗಳ ಹಿಂದೆ ಸದಾಶಿವನಗರದ ರಾಷ್ಟ್ರೋತ್ಥಾನ ಪರಿಷತ್‍ನಲ್ಲಿ ನಡೆದ ಸಂಸದರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿಗೆ ಬರುವವರನ್ನು ವಿಶೇಷವಾಗಿ ಮುತುವರ್ಜಿ ವಹಿಸಿ ಎಂದು ಸಂಘ ಪರಿವಾರದ ನಾಯಕರು ಸಲಹೆ ಕೊಟ್ಟಿದ್ದಾರೆ.
ಪಕ್ಷಕ್ಕೆ ಯಾರೇ ಬಂದರೂ ಅವರನ್ನು ತಾತ್ಸಾರದಿಂದ ನೋಡದೆ ಹೆಚ್ಚಿನ ಗಮನ ಹರಿಸಬೇಕು. ರಮೇಶ್ ಜಾರಕಿ ಹೊಳಿ ಸೇರಿದಂತೆ ಯಾರೇ ಬಂದರೂ ಸೂಕ್ತವಾದ ಸ್ಥಾನಮಾನ ನೀಡಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೆಳಹಂತದ ನಾಯಕರಿಗೆ ಮಾರ್ಗದರ್ಶನ ನೀಡಿದ್ದರು.
ಆರ್‍ಎಸ್‍ಎಸ್ ನಾಯಕರು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ರಮೇಶ್ ಜಾರಕಿ ಹೊಳಿ ತಮ್ಮ ಮುಂದಿನ ರಾಜಕೀಯ ನಡವಳಿಕೆ ಕುರಿತಂತೆ ತಮ್ಮ ಸಮುದಾಯದ ಶಾಸಕರೂ ಸೇರಿದಂತೆ ಆಪ್ತರ ಜೊತೆ ಮಾತುಕತೆ ನಡೆಸಲಿದ್ದಾರೆ. ಶಾಸಕರಾದ ಮಹೇಶ್ ಕುಮಟಳ್ಳಿ, ಶಿವಾನಂದ ಕೌಜಲಗಿ, ಬಿ.ನಾಗೇಂದ್ರ, ಪ್ರತಾಪ್‍ಗೌಡ ಪಾಟೀಲ್ ಸೇರಿದಂತೆ ಎಂಟಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಳೆದ ವಾರ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಪ್ರಸ್ತುತ ಕರ್ನಾಟಕದಲ್ಲಿನ ಬೆಳವಣಿಗೆಗಳ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಗಮನಕ್ಕೆ ತಂದಿದ್ದರು. ಪಕ್ಷಕ್ಕೆ ಯಾರೇ ಬಂದರೂ ಅಭ್ಯಂತರವಿಲ್ಲ. ಆದರೆ ಬಂದವರೆಲ್ಲರೂ ನಮಗೆ ಸ್ಥಾನಮಾನ ನೀಡಬೇಕು ಎಂದು ಪಟ್ಟು ಹಿಡಿಯುವುದು, ಇಲ್ಲವೆ ಸರ್ಕಾರವನ್ನೇ ಬ್ಲ್ಯಾಕ್‍ಮೇಲ್ ಮಾಡುವ ತಂತ್ರವನ್ನು ಅನುಸರಿಸಬಾರದೆಂಬ ಷರತ್ತು ವಿಧಿಸಿದ್ದರು.
ಹೈಕಮಾಂಡ್ ನೀಡಿರುವ ಸೂಚನೆಯನ್ನು ಯಡಿಯೂರಪ್ಪ , ರಮೇಶ್ ಜಾರಕಿಹೊಳಿ ಗಮನಕ್ಕೆ ತಂದಿದ್ದು, ಬಿಜೆಪಿಗೆ ಬಂದರೆ ಇಂತಹದ್ದೇ ಸ್ಥಾನಮಾನ ನೀಡಬೇಕೆಂಬ ಷರತ್ತುಗಳನ್ನು ವಿಧಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ.
ಇದನ್ನು ಬಹುತೇಕ ಒಪ್ಪಿಕೊಂಡಿರುವ ಜಾರಕಿ ಹೊಳಿ ಭವಿಷ್ಯದಲ್ಲಿ ತಾವು ಬಿಜೆಪಿಗೆ ಬಂದರೆ ಯಾವುದೇ ತೊಂದರೆ ಬರುವುದಿಲ್ಲ. ಆದರೆ ತಮ್ಮ ಬೆಂಬಲಿಗರ ಹಿತವನ್ನು ಕಾಪಾಡುವುದು ಅನಿವಾರ್ಯ ಎಂದಿದ್ದಾರೆ.
ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ರಮೇಶ್ ಜಾರಕಿ ಹೊಳಿ ಮುಂದಿನ ಬೆಳವಣಿಗೆಗಳ ಕುರಿತಂತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂಬುದರ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Comments