ಹರಿಯಾಣದ ಚುನಾವಣೆಯ ಬಿಗ್ ಫೈಟ್ ನಲ್ಲಿ ಕಾಂಗ್ರೆಸ್ ಪತಾಕೆಯನ್ನು ಎತ್ತಿ ಹಿಡಿದ ಬಲಿಷ್ಠ ನಾಯಕ!

ನವದೆಹಲಿ: ಕಾಂಗ್ರೆಸ್​-ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ. ಚುನಾವಣೆಯಲ್ಲಿ ಗೆಲ್ಲೋದು ಕಮಲವೋ ಅಥವಾ ಕೈ ಪಾಳಯವೋ ಎನ್ನುವ ರೋಚಕ ಕುತೂಹಲ ಜನರಲ್ಲಿ ಮನೆ ಮಾಡಿದೆ. ಆದ್ರೆ, ಈ ಚುನಾವಣೆಯನ್ನು ಮತ್ತೊಂದು ಌಂಗಲ್​ನಲ್ಲಿ ನೋಡೋದಾದ್ರೆ ಇದು ಬಿಜೆಪಿಗೆ ಎಚ್ಚರಿಕೆಯ ಕರೆ ಗಂಟೆ ಅಂತಲೂ ಹೇಳಬಹುದು ಹಾಗೂ ಕಾಂಗ್ರೆಸ್​ನ ಎಡವಟ್ಟು ಬೇಜವಾಬ್ದಾರಿತನದಿಂದ ಅವರ ಗೆಲುವಿನ ಸುಲಭದ ತುತ್ತು ಬಾಯಿಗೆ ಬರಲಿಲ್ಲ ಅಂತಲೂ ಅನ್ನಬಹುದು.. ಯಾಕಂದ್ರೆ, ಹರಿಯಾಣ ಕಾಂಗ್ರೆಸ್​ನಲ್ಲಿ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷವನ್ನೇ ಛಿದ್ರ ಛಿದ್ರ ಮಾಡಿದೆ. ಒಡೆದ ಮನೆಯಾಗಿಯೇ ಸ್ಪರ್ಧಿಗಿಳಿದ ಕಾಂಗ್ರೆಸ್​ ಹೈ ಕಮಾಂಡ್​ನ ಕೊನೆಯ ಕ್ಷಣದ ಆ ಒಂದು ನಿರ್ಧಾರ ಜಟ್ಟಿಗಳ ನಾಡಿನಲ್ಲಿ ಕೈ ಪಕ್ಷದ ಅಸ್ಥಿತ್ವ ಉಳಿಸಿದೆ.

ರಾಹುಲ್ ಗಾಂಧಿ ಎಡವಟ್ಟು..!
ಹೌದು.. ಹರಿಯಾಣದಲ್ಲಿ ಅಕ್ಷರಶಃ ಆಗಿದ್ದು ರಾಹುಲ್ ಗಾಂಧಿ ಎಡವಟ್ಟೇ.. ಯಾಕಂದ್ರೆ ಪಕ್ಷದ ಹಿರಿಯ ನಾಯಕ ಹಾಗೂ ಎರಡು ಬಾರಿ ರಾಜ್ಯ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್​ ಸಿಂಗ್ ಹೂಡಾರನ್ನ ರಾಹುಲ್ ಗಾಂಧಿ ಸೈಡ್​ಲೈನ್ ಮಾಡಿದ್ದರು. ತನ್ನ ಟೀಂನಲ್ಲಿ ಗುರುತಿಸಿಕೊಂಡಿದ್ದ ರೆಬೆಲ್ ನಾಯಕ ಹರಿಯಾಣ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಅಶೋಕ್ ತನ್ವರ್​ಗೆ ರಾಹುಲ್​ ಜಾಸ್ತಿ ಪ್ರಾಮುಖ್ಯತೆ ನೀಡಿದ್ದರು. ಆದ್ರೆ, ಪಕ್ಷದಲ್ಲಿ ಭೂಪಿಂದರ್ ಸಿಂಗ್​ ಹೂಡಾಗೆ ಬೆಂಬಲಿಗ ಶಾಸಕರು ಸಾಕಷ್ಟಿದ್ದರು. ಆದ್ರೆ, ವಿಧಾನಸಭೆ ಟಿಕೆಟ್ ವಿತರಣೆಯಲ್ಲಿ ಅಕ್ರಮ ನಡೀತಿದೆ. ಹಾಗೂ ಹರಿಯಾಣ ಕಾಂಗ್ರೆಸ್​ ಪಕ್ಷ ಭೂಪಿಂದರ್ ಸಿಂಗ್ ಹೂಡಾ ಕಾಂಗ್ರೆಸ್​ ಆಗಿ ಬದಲಾಗ್ತಿದೆ ಅಂತಾ ಎಗರಾಡಿ ತನ್ನನ್ನು ನಂಬಿದ್ದ ರಾಹುಲ್​ಗೆ ಅಶೋಕ್ ತನ್ವರ್ ಕೈ ಕೊಟ್ಟರು. ಚುನಾವಣೆಗೆ ಕೇವಲ 15 ದಿನ ಇರುವಂತೆಯೇ ಮಾತೃ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ತನ್ವರ್ ರಾಜೀನಾಮೆ ನೀಡಿದ್ದು ಹರಿಯಾಣ ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿತ್ತು. 90ರಲ್ಲಿ 20 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲೋದು ಕಷ್ಟ ಅಂತಾ ಹೇಳಲಾಗುತ್ತಿತ್ತು.

ಸೋನಿಯಾ ‘ಹೂಡಿ’ದ ಅಸ್ತ್ರ..!
​ಇನ್ನು ಹೇಳಿ ಕೇಳಿ ಭೂಪಿಂದರ್ ಸಿಂಗ್ ಹೂಡಾ ಸೋನಿಯಾ ಗಾಂಧಿ ಆಪ್ತರು. ಆದ್ರೆ, ರಾಹುಲ್​ ಗಾಂಧಿ ಅವರನ್ನ ಸೈಡ್​ಲೈನ್ ಮಾಡಿದ್ದು ಹೂಡಾ ಆಪ್ತ ಶಾಸಕರನ್ನ ಕೆರಳಿಸಿತ್ತು. ಅಲ್ಲದೇ, ತಮಗೆ ಟಿಕೆಟ್ ನೀಡದ ಕೈ ಪಾಳಯದ ವಿರುದ್ಧ ಸಿಡಿದ ಕೆಲವರು ಸ್ವತಂತ್ರವಾಗಿಯೇ ಸ್ಪರ್ಧಿಸಿದ್ರು. ಆದ್ರೆ, ಸೋನಿಯಾ ಗಾಂಧಿ ಹೂಡಾ ಮೇಲೆ ಇಟ್ಟಿದ್ದ ನಂಬಿಕೆಯೇ ಇಂದು ಹರಿಯಾಣದಲ್ಲಿ ಕಾಂಗ್ರೆಸ್​ ಅಸ್ತಿತ್ವವನ್ನು ಉಳಿಸಿದೆ ಯಾಕಂದ್ರೆ, ಚುನಾವಣೆಗೆ ಜಸ್ಟ್​ 42 ದಿನಗಳು ಬಾಕಿ ಇದ್ದಾಗ ಭೂಪಿಂದರ್ ಸಿಂಗ್​ ಹೂಡಾಗೆ ಸೋನಿಯಾ ಗಾಂಧಿ ಚುನಾವಣೆಯ ಜವಾಬ್ದಾರಿ ವಹಿಸಿದ್ದರು. ಅದರಂತೆ ಹೂಡಾ ತಮ್ಮ ನಾಯಕತ್ವವನ್ನು ಸಮರ್ಪಕವಾಗಿ ನಿಭಾಯಿಸಿ ಇಂದು ರಾಜ್ಯದಲ್ಲಿ ಕಾಂಗ್ರೆಸ್​ನ ಉತ್ತಮ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ ಅಂದ್ರೆ ತಪ್ಪಾಗಲ್ಲ.

ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ..!
ಇನ್ನು, ಈ ಫಲಿತಾಂಶ ಹರಿಯಾಣ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ ಅಂತಲೂ ಹೇಳಬಹುದು. ಯಾಕಂದ್ರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 90 ಕ್ಷೇತ್ರಗಳಲ್ಲಿ 47 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಆದ್ರೆ, ಈ ಬಾರಿ 45 ಕ್ಷೇತ್ರಗಳನ್ನು ದಾಟಲು ಹರಸಾಹಸಪಡ್ತಿದೆ. ಕಳೆದ ಬಾರಿಗಿಂತ ಈ ಬಾರಿ ಜಾಸ್ತಿ ಕ್ಷೇತ್ರಗಳನ್ನೇ ಗೆಲ್ತೀವಿ ಅಂತ ಹೇಳ್ತಿದ್ದ ಕಮಲ ಪಾಳಯಕ್ಕೆ ಕೊಂಚ ಮುಜುಗರವೂ ಉಂಟಾಗಿದೆ. ಇದರ ಅರ್ಥ ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಗೆ ಮತದಾರರ ಆಶೀರ್ವಾದ ಕಡಿಮೆಯೇ ಸಿಕ್ಕಿದ್ದು, ಕೇಸರಿಗಳು ಎಚ್ಚೆತ್ತು ರಾಜ್ಯ ಜನರ ಸಮಸ್ಯೆಗಳತ್ತ ಹೆಚ್ಚು ಗಮನಹರಿಸಬೇಕಿದೆ.

ಒಟ್ಟಿನಲ್ಲಿ ಹರಿಯಾಣದಲ್ಲಿ ಬಿಜೆಪಿ ಕೆಟ್ಟ ಕನಸಿನಲ್ಲಿಯೂ ಯೋಚಿಸಿದ ಫಲಿತಾಂಶವಂತೂ ಬಂದಿದೆ. ಹಾಗಂತ ಕಾಂಗ್ರೆಸ್​ ಅಧಿಕಾರಕ್ಕೆ ಏರಿಬಿಟ್ಟಿತು ಅನ್ನೋ ಹಾಗೂ ಇಲ್ಲ. ಆದ್ರೆ, ಸ್ಥಳೀಯ ಹಿರಿಯನಾಯಕನೊಬ್ಬ ಹೇಗೆ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಬಲ್ಲ ಅನ್ನೋದನ್ನು ಭೂಪಿಂದರ್ ಹುಡಾ ತೋರಿಸಿಕೊಟ್ಟಿದ್ದಾರೆ. ಇನ್ನು ಸದ್ಯಕ್ಕಂತೂ ಜನನಾಯಕ ಜನತಾ ಪಾರ್ಟಿ ನಾಯಕ ದುಶ್ಯಂತ್ ಸಿಂಗ್ ಚೌಟಾಲಾರತ್ತ ಎಲ್ಲರ ಚಿತ್ತ ನೆಟ್ಟಿದ್ದು, ಅವರ ನಿರ್ಧಾರದ ಮೇಲೆ ಹರಿಯಾಣದಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿತಾರೆ ಅನ್ನೋದು ಬಹುತೇಕ ನಿರ್ಣಯವಾಗಲಿದೆ.

Comments