ಬಿಗ್ ನ್ಯೂಸ್ : ಸಿದ್ದರಾಮಯ್ಯರನ್ನ ಕಟ್ಟಿ ಹಾಕಲು ಬಿಜೆಪಿ ರಣತಂತ್ರ..? ಏನದು ಪ್ಲಾನ್ ಗೊತ್ತಾ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ಗಿಂತಲೂ ಬಿಜೆಪಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ದೊಡ್ಡ ತಲೆ ನೋವಾಗಿದ್ದಾರಂತೆ. ಹೀಗಾಗಿ ಬಿಜೆಪಿ, ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಿ ಕಟ್ಟಿಹಾಕಲು ಪ್ಲಾನ್ ಮಾಡಿದೆ ಅನ್ನೋ ಚರ್ಚೆ ಶುರುವಾಗಿದೆ.
ಏನದು ಬಿಜೆಪಿ ಪ್ಲಾನ್..?
ಬಿಜೆಪಿಯ ಪ್ರಮುಖ ತಂತ್ರ ಏನೆಂದರೆ ಕಾಂಗ್ರೆಸ್​ ಜೊತೆಗೆ ಇರುವ ಕುರುಬ ಸಮುದಾಯವನ್ನ ಸೆಳೆಯೋದು. ಇದರ ಮುಂದುವರಿದ ಭಾಗವಾಗಿ ಸರ್ಕಾರ ರಚನೆಗೆ ಕಾರಣರಾಗಿರುವ ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನವನ್ನ ಆದ್ಯತೆಯ ಮೇರೆಗೆ ನೀಡುವುದಾಗಿದೆ. ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್​ಗೆ ಸಚಿವ ಸ್ಥಾನವನ್ನ ನೀಡಿ, ಕುರುಬ ಸಮುದಾಯದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯರನ್ನ ಕಟ್ಟಿ ಹಾಕಲು ತಂತ್ರ ರೂಪಿಸುತ್ತಿದೆ ಅಂತಾ ಹೇಳಲಾಗುತ್ತಿದೆ.
ಇನ್ನು ಈಗಾಗಲೇ ಯಡಿಯೂರಪ್ಪ ಸಂಪುಟದಲ್ಲಿ ಕುರುಬ ಸಮುದಾಯದ ನಾಯಕರಾದ ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜ್​ಗೆ ಮಂತ್ರಿಗಿರಿಯನ್ನ ನೀಡಲಾಗಿದೆ. ಈಗ ಉಳಿದ ಮೂವರು ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಿದರೆ ಐವರು ಮಂತ್ರಿಯಾದಂತೆ ಆಗುತ್ತದೆ. ಇದರಿಂದ ಇಡೀ ಕುರುಬ ಸಮುದಾಯದ ಬೆನ್ನಿಗೆ ಬಿಜೆಪಿ ಇದೆ. ಇದುವರೆಗೂ ಯಾರೂ ನೀಡದ ಅವಕಾಶವನ್ನ ಬಿಜೆಪಿ ಕುರುಬ ಸಮುದಾಯಕ್ಕೆ ನೀಡಿದೆ ಅನ್ನೋ ಸಂದೇಶವನ್ನ ರವಾನಿಸಲು ಆಡಳಿತ ಪಕ್ಷ ಮುಂದಾಗಿದೆಯಂತೆ.
ಇತ್ತೀಚೆಗೆ ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ದೊಡ್ಡ ತಲೆನೋವಾಗಿದ್ದಾರೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ದಾಖಲೆ ಬಿಡುಗಡೆ ಮಾಡುವ ಮೂಲಕ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹಾಗಾಗಿ ಡಿ.ಕೆ. ಶಿವಕುಮಾರ್​​ ಅವರನ್ನ ಎದುರಿಸಬಹುದಾದರೂ ಸಿದ್ದರಾಮಯ್ಯ ವಿಚಾರದಲ್ಲಿ ಕಷ್ಟ ಅನ್ನೋ ನಿರ್ಧಾರಕ್ಕೆ ಬಿಜೆಪಿ ಬಂದಿದ್ಯಂತೆ.