ಕರ್ನಾಟಕದಲ್ಲಿ "ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ. ಗೃಹ ಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ, ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಅಸ್ತ್ರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಪ್ರತ್ಯಸ್ತ್ರ ಹೂಡಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಗ್ಗೆ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸಿಡಿಮಿಡಿಗೊಳ್ಳುವುದಕ್ಕೆ ಕಾರಣವೇನು? ರಾಜ್ಯದ ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ ಇರುತ್ತದೆ. ಮುಖ್ಯಮಂತ್ರಿಯವರೇ ಮೊದಲು ಕಂದಾಯ ಸಚಿವರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದರು.
ಸಿದ್ದರಾಮಯ್ಯ ಟ್ವೀಟ್ ಗೆ ವಿಷಾದ ವ್ಯಕ್ತಪಡಿಸಿದ ಅಶೋಕ್ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಟ್ವೀಟ್ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈಗಾಗಲೇ ಪ್ರವಾಹಕ್ಕೆ ತುತ್ತಾದ ಉತ್ತರ ಕನ್ನಡ, ದಕ್ಷಿಣಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಆ ಸಮಯದಲ್ಲಿ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದೀರಿ. ನನ್ನ ಭೇಟಿ ವಿಚಾರ ತಮಗೆ ಗೊತ್ತಾಗದೇ ಇರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿರುಗೇಟು ಕೊಟ್ಟರು.
ರಾಜ್ಯದಲ್ಲಿ ಪ್ರತಿಪಕ್ಷಕ್ಕೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟ್ವೀಟ್ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು. ಸದನದಲ್ಲಿ ಮಾತನಾಡುವಾದ ಪ್ರತಿಪಕ್ಷವು ಅಸೆಂಬ್ಲಿಯ ನೆರವು ಎನ್ನುತ್ತೀರಿ, ನಿಮಗೂ ವಿಪಕ್ಷವಾಗಿ ಜವಾಬ್ದಾರಿ ಇದೆಯಲ್ಲವೇ. ನೀವು ಎಲ್ಲೆಲ್ಲಿ ಭೇಟಿ ನೀಡಿದ್ದೀರಿ ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದರು.
"ಡಿಕೆಶಿ, ಸಿದ್ದರಾಮಯ್ಯ ಹೊಂದಾಣಿಕೆಯನ್ನು ತೋರಿಸಲಿ" ಬೆಂಗಳೂರಿನಲ್ಲಿ ಗಲಭೆ ನಡೆದ ಸ್ಥಳಕ್ಕೆ ನಾನು ತೆರಳಿದರೆ ನಿಮಗೆ ಭಯ ಆಗುವುದಾದರೆ ನಾನು ಹೋಗುವುದಿಲ್ಲ ಬಿಡಿ. ನಾನು ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೊಂದಾಣಿಕೆಯಿಂದ ಇದ್ದೇವೆ. ಅವರು ನನ್ನ ಸಹೋದ್ಯೋಗಿಯಾಗಿದ್ದು, ನಾನು ಅವರ ಇಲಾಖೆ ಬಗ್ಗೆ ಮತ್ತು ಅವರು ನನ್ನ ಇಲಾಖೆ ಬಗ್ಗೆ ಮಾತನಾಡಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೀಗೆ ಹೊಂದಾಣಿಕೆಯಿಂದ ಮಾತಾಡಲಿ ನೋಡೊಣ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದರು.
Comments
Post a Comment