ಕಳೆದ ವರ್ಷ ಐಪಿಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಒಂದು ವರ್ಷ ಕಾಲ ತಮಿಳುನಾಡಿನಲ್ಲಿ ಯುವಕರಿಗೆ ನಾಯಕತ್ವ ತರಬೇತಿ ನೀಡುತ್ತಿದ್ದ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಇದೀಗ ತಮ್ಮ ತಾಯ್ನೆಲದ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಕುಟುಂಬ ರಾಜಕಾರಣದಲ್ಲೇ ಮುಳುಗೇಳುತ್ತಿರುವ ತಮಿಳುನಾಡು ರಾಜಕೀಯಕ್ಕೆ ಹೊಸ ರೂಪ ಕೊಡುವ ಉಮೇದಿನಲ್ಲಿದ್ದಾರೆ. ಭವಿಷ್ಯದ ರಾಜಕೀಯ ಹಾದಿ, ತಮಿಳುನಾಡು ರಾಜಕೀಯ ಸೇರಿ ವಿವಿಧ ವಿಚಾರಗಳನ್ನು ಈ ಸಂದರ್ಭದಲ್ಲಿ ಅವರು ‘ಕನ್ನಡಪ್ರಭ’ ದೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ....
ಅಣ್ಣಾಮಲೈ ಅವರ ದಿಢೀರ್ ರಾಜಕೀಯ ಪ್ರವೇಶ ಯಾಕೆ?
ಇದು ದಿಢೀರ್ ಅಲ್ಲ. ಸಾಮಾಜಿಕ ಬದಲಾವಣೆ ಎಷ್ಟುಮುಖ್ಯವೋ, ರಾಜಕೀಯ ಬದಲಾವಣೆಯೂ ಅಷ್ಟೇ ಮುಖ್ಯ. ಪಾರದರ್ಶಕವಾಗಿ ಹೇಳಬೇಕು ಅಂದರೆ ನನ್ನ ಮನಸ್ಥಿತಿಗೆ ಯಾವುದೇ ಬೇರೆ ಪಾರ್ಟಿ ಹೊಂದಾಣಿಕೆ ಆಗಲ್ಲ. ಹಾಗಾಗಿ ಬಿಜೆಪಿ ಸೇರಿದೆ.
ಆಗ ಆಡಳಿತಶಾಹಿ, ಈಗ ರಾಜಕೀಯಶಾಹಿ. ಈ ಫೇಸ್ ಚೇಂಜಿಂಗ್ ಕಷ್ಟಆಗುವುದಿಲ್ಲವೇ?
ನಾನು ಫೇಸ್‌ಚೇಂಜ್ ಅಂಥ ಹೇಳಲ್ಲ. ರಾಜಕೀಯದಲ್ಲಿ ಅಣ್ಣಾಮಲೈನನ್ನು ನೋಡಿ. ಆ ಮೇಲೆ ನೀವು ಈ ಪ್ರಶ್ನೆ ಕೇಳಿ. ಏನ್ ಸರ್ ನೀವು ಆಗ ಈ ಮಾತು ಹೇಳಿದ್ರೀ ಈಗ ಬೇರೆ ಹೇಳ್ತಾ ಇದ್ದೀರಾ ಅಂಥ. ನಾನು ಯಾವಾಗಲೂ ಅದೇ ಅಣ್ಣಾಮಲೈ ಆಗಿ ಇರ್ತೀನಿ. ನಾನು ಬದಲಾಗಲ್ಲ.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಅಬ್ಬರ ಇದೆ. ನೀವು ರಾಷ್ಟ್ರೀಯ ಪಕ್ಷ ಆಯ್ಕೆ ಮಾಡಿಕೊಂಡಿದ್ದೀರಾ? ಹೇಗೆ ಇದು?
ನಾನು ಕರ್ನಾಟಕ, ತಮಿಳುನಾಡಿನಲ್ಲಿ ಕೆಲಸ ಮಾಡಿದ ಮನುಷ್ಯ. ನನಗೆ ಯಾವಾಗಲೂ ದೇಶ ಮೊದಲು. ತಮಿಳುನಾಡಿನ ರಾಜಕಾರಣಕ್ಕೂ ಈಗ ಹೊಸ ಆಯಾಮ ಬೇಕಿದೆ. ಇದನ್ನು ಬಿಜೆಪಿ ತಮಿಳುನಾಡಿನಲ್ಲಿ ಕೊಡಲಿದೆ. ರಾಷ್ಟ್ರೀಯ ಪಕ್ಷದಲ್ಲಿ ಕೆಲಸ ಮಾಡಲು ಹೆಚ್ಚಿನ ಅವಕಾಶಗಳಿರುತ್ತವೆæ. ಹಲವು ವರ್ಷ ಕೆಲಸ ಮಾಡಬಹುದು. ಕರ್ನಾಟಕದಲ್ಲೂ ನಾವು ಕೆಲಸ ಮಾಡಬಹುದು.
ತಮಿಳುನಾಡಿನಲ್ಲಿ ನಿಮ್ಮಿಂದ ಬಿಜೆಪಿ ಏನನ್ನು ನಿರೀಕ್ಷೆ ಮಾಡುತ್ತಿದೆ? ಬಿಜೆಪಿಯಿಂದ ನೀವು ಏನು ನಿರೀಕ್ಷೆ ಮಾಡುತ್ತಿದ್ದೀರಿ?
ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ಬಿಜೆಪಿಯನ್ನು ಸ್ವೀಕರಿಸಲು ಜನ ಸಿದ್ಧರಾಗಿದ್ದಾರೆ. ಈಗಿನ ಯುವಪೀಳಿಗೆಗೆ ರಾಜಕಾರಣದಲ್ಲಿ ಸಬಲೀಕರಣ ಬೇಕಾಗಿದೆ. ಇವರು ಈಗ ಜಾತಿ, ಕುಟುಂಬ ನೋಡ್ತಾ ಇಲ್ಲ. ಅಸ್ಸಾಂ, ತ್ರಿಪುರ, ಪಶ್ಚಿಮ ಬಂಗಾಳದಲ್ಲಿ ಇದು ಸಾಬೀತಾಗಿದೆ.
ನನ್ನ ನಿರೀಕ್ಷೆ ತಮಿಳುನಾಡು ಜನರಿಗೆ ಒಳ್ಳೆ ಪಕ್ಷ ಕೊಡಬೇಕು ಎಂಬುದು. ಆ ಪಕ್ಷ ರಾಷ್ಟ್ರೀಯ ಹಿತಾಸಕ್ತಿ ಹೊಂದಿರಬೇಕು. ಅದೇ ವೇಳೆ ತಮಿಳು ಸಂಸ್ಕೃತಿಯನ್ನೂ ಉಳಿಸಬೇಕು. ಜೊತೆಗೆ ತಮಿಳುನಾಡು ದೆಹಲಿ ಮಟ್ಟದಲ್ಲಿ ಸರಿಯಾಗಿ ಪ್ರತಿನಿಧಿಸಿಲ್ಲ. ಕೇಂದ್ರದಿಂದ ಕೆಲ ಸವಲತ್ತು ಸರಿಯಾಗಿ ಸಿಗ್ತಾ ಇಲ್ಲ ಅನಿಸುತ್ತಿದೆ. ಇದೆಲ್ಲ ಬದಲಾಗಬೇಕಿದೆ. ಇದಕ್ಕಾಗಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.
ನಿಮ್ಮ ನಿವೃತ್ತಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಇದೆ ಅನ್ನುವ ಮಾತುಗಳು ಆಗಲೇ ಕೇಳಿ ಬಂದಿದ್ವು? ಈಗ ಅದು ನಿಜವಾಯ್ತಲ್ಲ?
ಇಲ್ಲ. ನನಗೆ ಎಷ್ಟೋ ಮಂದಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಕರ್ನಾಟಕದಲ್ಲಿ ನಾನು ಹೆಚ್ಚಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಕೊನೆಯ ಪೋಸ್ಟಿಂಗ್ ಕುಮಾರಸ್ವಾಮಿ ಅವರು ಕೊಟ್ಟಿದ್ದು. ಬಿಜೆಪಿಯಲ್ಲಿ ನಾನು ಕೆಲಸ ಮಾಡಿದ್ದು ಬರೀ ಮೂರು ದಿನ ಮಾತ್ರ. ನಾನು ಪೊಲೀಸ್ ವೃತ್ತಿಯಲ್ಲಿದ್ದಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಹಲವರನ್ನು ಜೈಲಿಗೆ ಕಳುಹಿಸಿದ್ದೇನೆ. ಅದು ನಮ್ಮ ಯೂನಿಫಾರಂ ಧರ್ಮ. ಅದು ಬೇರೆ, ಈ ರಾಜಕೀಯ ಬೇರೆ.
Comments
Post a Comment