'ಸಿದ್ದರಾಮಯ್ಯನವ್ರೇ, ಗಲಭೆ ನಡೆದ ಜಾಗಕ್ಕೆ ನಾನು ಹೋದ್ರೆ ನಿಮಗೆ ಭಯ ಆಗೋದಾದ್ರೆ ಹೋಗಲ್ಲ' ಬಿಜೆಪಿ ನಾಯಕನ ಟಾಂಗ್ ಗೆ ಬೆಚ್ಚಿಬಿದ್ದ ಸಿದ್ದು

ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆಯಷ್ಟೇ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ. ಆದರೆ ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ ಎಂದು ಕಟುವಾಗಿ ಟೀಕಿಸಿದ್ದರು.

ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಕಿಡಿಕಾರಿದ್ದ ಸಿದ್ದರಾಮಯ್ಯ, ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ? ಸಿಎಂ ಬಿಎಸ್ ಯಡಿಯೂರಪ್ಪನವರೇ, ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ ಎಂದು ಆಗ್ರಹಿಸಿದ್ದರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಉಡುಪಿ, ದಕ್ಷಿಣಕನ್ನಡ, ಕೊಡಗು, ಉತ್ತರಕನ್ನಡ ಮತ್ತು ಹಾಸನ ಸೇರಿ ಐದು ಜಿಲ್ಲೆಗಳನ್ನು ಭೇಟಿ ಮಾಡಿ ಬಂದಿದ್ದೀನಿ. ಎಲ್ಲೆಲ್ಲಿ ಭೂಕುಸಿತ ಆಗಿದೆಯೋ ಅಲ್ಲಿ ನಾಲ್ಕು ದಿನಗಳ ಕಾಲ ಸ್ವತಃ ಪ್ರವಾಸ ಮಾಡಿ ಬಂದಿದ್ದೀನಿ ಎಂದು ಹೇಳಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಆರೋಪಕ್ಕೆ ವ್ಯಂಗ್ಯವಾಡಿರುವ ಅಶೋಕ್, ಗೌರವಾನ್ವಿತ ಸಿದ್ದರಾಮಯ್ಯನವರು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರಿಂದ ಅವರಿಗೆ ಮಾಹಿತಿ ಸಿಕ್ಕಿಲ್ಲ ಅಂತಾ ಕಾಣುತ್ತೆ. ದಯವಿಟ್ಟು ನೀವು ಆಸ್ಪತ್ರೆಯಲ್ಲಿದ್ದಾಗ ಏನೇನು ಘಟನೆಗಳು ಆಗಿದೆ ಅನ್ನೋದರ ಬಗ್ಗೆ ಮಾಧ್ಯಮಗಳ ವರದಿಯನ್ನು ನೋಡಿ ತಿಳಿದುಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾ ಪ್ರವಾಸ ಮಾಡಿದ ನಂತರ ಇಡೀ ರಾಜ್ಯದ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ಸಭೆ ಮಾಡಿದ್ದೀನಿ. ಜಿಲ್ಲಾಧಿಕಾರಿಗಳಿಗೆ ಕೊಡಬೇಕಾದ ಸೂಚನೆಗಳನ್ನು ಕೊಟ್ಟಿದ್ದೇನೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದರು. ಹಾಗಾಗಿ ಈ ವಿಚಾರ ಅವರಿಗೆ ತಿಳಿಯದೇ ಇರೋದಿಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿರುವ ಅಶೋಕ್, ಬೆಂಗಳೂರು ಗಲಭೆ ಕಾಂಗ್ರೆಸ್‌ ಪ್ರೇರಿತ ಆಗಿರೋದ್ರಿಂದ ನಾನು ಕೆಜೆಹಳ್ಳಿಯಲ್ಲಿ ಓಡಾಡಬಾರದು ಅನ್ನುವ ಭಯವಿದ್ದರೆ ನಾನೇನು ಅಲ್ಲಿಗೆ ಹೋಗಲ್ಲ ಎಂದು ಟಾಂಗ್ ನೀಡಿದ್ದಾರೆ.

ಇನ್ನು ನೀವು ಮಾಡಿರುವ ಟ್ವೀಟ್‌ನ್ನು ನೋಡಿದ್ದೇನೆ ಎಂದ ಅಶೋಕ್, ಗೃಹ ಸಚಿವರು ಪ್ರವಾಹದ ಸ್ಥಳದಲ್ಲಿ ಓಡಾಡ್ತಿದ್ದಾರೆ. ಕಂದಾಯ ಸಚಿವರು ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಇದ್ದಾರೆ ಎಂದು ಹೇಳಿದ್ದೀರಿ. ಬಸವರಾಜ್ ಬೊಮ್ಮಾಯಿ ಮತ್ತು ನಾನು ಆತ್ಮೀಯ ಸ್ನೇಹಿತರು. ನಾನು ಕೂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿದ್ದೇನೆ. ನಮ್ಮಲ್ಲಿ ಹೊಂದಾಣಿಕೆ ಇದೆ. ಈ ಸಂಪ್ರದಾಯವನ್ನು ಕಾಂಗ್ರೆಸ್‌ನ ಮೀಟಿಂಗ್‌ನಲ್ಲಿ ನೀವು ಮತ್ತು ಡಿಕೆ ಶಿವಕುಮಾರ್ ಮಾಡಿ ತೋರಿಸಿದರೆ ಆವಾಗ ಕಾಂಗ್ರೆಸ್‌ ಪಾರ್ಟಿಗೆ ಶಹಬಾಸ್‌ಗಿರಿಯನ್ನು ನಾವೂ ಕೊಡ್ತೀವಿ, ಇದು ನನ್ನ ಆಗ್ರಹವಲ್ಲ ಸಲಹೆ ಅಂತ ತಿಳಿದುಕೊಳ್ಳಿ ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ವಿರೋಧ ಪಕ್ಷ ಎಂದರೆ ನೆರಳು ಇದ್ದಂಗೆ ಎಂದು ವಿಧಾನಸೌಧದಲ್ಲಿ ಗುಡುಗಿದ್ದೀರಿ. ಈಗ ಎಲ್ಲಿದೆ ನಿಮ್ಮ ನಿಮ್ಮ ನೆರಳು ಎಂದ ಅಶೋಕ್, ನಮ್ಮನ್ನು ಪ್ರಶ್ನಿಸುವ ಮೊದಲು ನಿಮ್ಮ ಕಾಂಗ್ರೆಸ್‌ ಪಕ್ಷದ ಎಷ್ಟು ಮಂದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನೀವು ಬರೀ ಬೆಂಗಳೂರು ಗಲಭೆಯನ್ನು ಸಮರ್ಥನೆ ಮಾಡೋಕೆ ನಿಂತಿದ್ದೀರಿ. ನಮ್ಮನ್ನು ತೋರಿಸುವಾಗ ನಾಲ್ಕು ಬೆರಳು ನಿಮ್ಮನ್ನೇ ತೋರಿಸುತ್ತೆ ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ಮಾತಾಡಿಕೊಳ್ಳಿ ಎಂದು ಟೀಕಿಸಿದ್ದಾರೆ. ಅಲ್ಲದೇ ನಾನು ಕಂದಾಯ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೀನಿ. ಇನ್ನೂ ಎಲ್ಲೆಲ್ಲಿ ಹಣ ಬಿಡುಗಡೆಯಾಗಬೇಕೋ ಅಲ್ಲಿ ಬಿಡುಗಡೆ ಮಾಡೋಕೆ ಕ್ರಮ ಕೈಗೊಳ್ತೀನಿ. ಈಗಾಗಲೇ ರಾಯಚೂರು ಮತ್ತು ಯಾದಗಿರಿ ಭೇಟಿ ದಿನ ನಿಗದಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ಮಾತನಾಡಿದ್ದೀನಿ ಎಂದಿದ್ದಾರೆ

Comments