ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನಾ ಸಂಘಟನೆ ಈಗ 'ಸೋನಿಯಾ ಸೇನೆ' ಯಾಗಿ ಮಾರ್ಪಟ್ಟಿದೆ ಎಂದು ಬಾಲಿವುಡ್ ನಟಿ ಕಂಗನಾ ರನೋಟ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧು ಮತ್ತು ಅವರ ಚಾಲಕನ ಗುಂಪು ಹತ್ಯೆ ಹಾಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಕುರಿತಾಗಿ ಕಂಗನಾ ರನೋಟ್ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಆಡಳಿತ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಟೀಕಿಸಿದ್ದಾರೆ.
'ಬೆದರಿಕೆಯೊಡ್ಡುವವರ ಎದುರು ಎಂದೂ ನಾವು ಮಣಿಯಬಾರದು. ಶಿವಸೇನೆ ಚುನಾವಣೆಯಲ್ಲಿ ಸೋತರೂ ನಾಚಿಕೆ ಬಿಟ್ಟು ಮೈತ್ರಿ ಸರ್ಕಾರವನ್ನು ರಚಿಸಿತು. ಇದರಿಂದಾಗಿ ಶಿವಸೇನೆ ಈಗ ಸೋನಿಯಾ ಸೇನೆಯಾಗಿ ಮಾರ್ಪಟ್ಟಿದೆ' ಎಂದು ಅವರು ಹೇಳಿದ್ದಾರೆ. ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಬಾಲಿವುಡ್ ನಟಿ ಕಂಗನಾ ರನೋತ್ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗದಲ್ಲಿದ್ದ 'ಮಣಿಕರ್ಣಿಕಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್' ಕಚೇರಿಯ ಒಂದು ಭಾಗವನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿ ಬುಧವಾರ ನೆಲಸಮಗೊಳಿಸಿದ್ದರು. ಸದ್ಯ ಈ ಕಾರ್ಯಕ್ಕೆ ಬಾಂಬೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಗುರುವಾರ ಮಧ್ಯಾಹ್ನ ಇದರ ವಿಚಾರಣೆ ನಡೆಸಲಿದೆ.