ಸೆಪ್ಟಂಬರ್ 17 ಕ್ಕೆ ಪಿತೃ ಪಕ್ಷ ಮುಗಿಯುತ್ತದೆ. ಇದಾದ ಬಳಿಕ ಅಂದರೆ ಸೆ. 18 ಅಥವಾ 19ರ ಬಳಿಕ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. ಸೆ. 13 ಅಥವಾ 14 ಕ್ಕೆ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ವರಿಷ್ಠರ ಜೊತೆಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ವಲಸಿಗರ ಪೈಕಿ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಎಚ್ ವಿಶ್ವನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಪೈಕಿ ಎಂಬಿಟಿ ಹಾಗೂ ಆರ್. ಶಂಕರ್‌ಗೆ ಸಚಿವ ಸ್ಥಾನ ಸಿಗಲಿದೆ. ಅದರಂತೆ ಮೂಲ ಬಿಜೆಪಿಯಿಂದ ಅರವಿಂದ್ ಲಿಂಬಾವಳಿ ಹಾಗೂ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸದ್ಯ ವಿಸ್ತರಣೆಯನ್ನು ಮಾಡಿ ಡಿಸೆಂಬರ್ ಕೊನೆಯಲ್ಲಿ ಪುನಾರಚನೆ ಮಾಡುವ ಸಾಧ್ಯತೆ ಇದೆ ಎಂಬುವುದು ಮೂಲಗಳ ಮಾಹಿತಿ. ಈ ನಡುವೆ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲು ಪೈಪೋಟಿಯೂ ಶುರುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ.
Comments
Post a Comment