ರಾಮ ಮಂದಿರ ನಿರ್ಮಾಣದಿಂದ ಬಡವರ ಹೊಟ್ಟೆ ತುಂಬುತ್ತಾ ಎನ್ನುವ ಪ್ರಶ್ನೆಗೆ RSS ಮುಖ್ಯಸ್ಥರು ಕೊಟ್ಟ ಉತ್ತರ



ಅಸಂಖ್ಯಾತ ಹಿಂದೂಗಳ ಕನಸಿನ, ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣ ಸಂಬಂಧ ನಿಧಿ ಸಂಗ್ರಹ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟಿನ ಸದಸ್ಯರೂ ಆಗಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಸಚಿವರುಗಳು, ರಾಜಕೀಯ ಮುಖಂಡರು ನಿಧಿ ಸಂಗ್ರಹ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಾತ್ಯಾತೀಯವಾಗಿ ಮಂದಿರ ನಿರ್ಮಾಣಕ್ಕೆ ಭಾರೀ ಪ್ರಮಾಣದಲ್ಲಿ ನಿಧಿ ಹರಿದು ಬರುತ್ತಿದೆ. ಈ ನಡುವೆ, 'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಬಡವರ ಹೊಟ್ಟೆ ತುಂಬುತ್ತಾ ಎನ್ನುವ ಪ್ರಶ್ನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಸರಸಂಘ ಸಂಚಾಲಕರು ಉತ್ತರವನ್ನು ನೀಡಿದ್ದಾರೆ. ಮಹಾರಾಷ್ಟ್ರದ ಯುವಜನ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೋಹನ್ ಭಾಗ್ವತ್ ಭಾಗವಹಿಸಿದ್ದರು. ಈ ವೇಳೆ, ವಿದ್ಯಾರ್ಥಿನಿಯೊಬ್ಬರು ಮೇಲಿನ ಪ್ರಶ್ನೆಯನ್ನು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ಭಾಗ್ವತ್, "ರಾಮ ಮಂದಿರ ನಿರ್ಮಾಣವಾಗದಿದ್ದರೂ ಬಡವರು ಉದ್ದಾರವಾಗಿದೆಯಾ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡುವ ವಿಚಾರ ಮುಖ್ಯವಲ್ಲ. ನಮ್ಮ ದೇಶದ ಸಂಸ್ಕೃತಿಯ ಆದರ್ಶ ಪುರುಷ ಶ್ರೀರಾಮ". "ಶ್ರೀರಾಮ ನಮ್ಮ ಆದರ್ಶ ಪುರುಷ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅವನ ಜನ್ಮಭೂಮಿಯಲ್ಲಿ ಅವನಿಗೆ ಉತ್ತಮವಾದ ಸ್ಮಾರಕ/ದೇವಾಲಯ ಆಗಬೇಕಿದೆ. ವಿಚಾರ ಇಷ್ಟೇ"ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. ಭಾಗ್ವತ್ ಅವರ ಈ ಉತ್ತರಕ್ಕೆ ಭಾರೀ ಕರತಾಡನ ವ್ಯಕ್ತವಾಯಿತು.

Comments